ಮೊದಲ ಟೆಸ್ಟ್ ಗೆ ಮಳೆ ಅಡ್ಡಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 208/8
ರಬಾಡಗೆ ಐದು ವಿಕೆಟ್, ಕೆ.ಎಲ್.ರಾಹುಲ್ ದಿಟ್ಟ ಹೋರಾಟ

ಕೆ.ಎಲ್.ರಾಹುಲ್ (Photo: BCCI)
ಸೆಂಚೂರಿಯನ್: ಮಂದ ಬೆಳಕು ಹಾಗೂ ತುಂತುರು ಮಳೆಯಿಂದಾಗಿ ಮಂಗಳವಾರ ಆರಂಭವಾದ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಟೆಸ್ಟ್ ನಲ್ಲಿ ಭಾರತ ತನ್ನ ಮೊದಲ ಇನಿಂಗ್ಸ್ ನಲ್ಲಿ 59 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ.
ಮೈದಾನ ಒದ್ದೆಯಾಗಿದ್ದ ಕಾರಣ ಟಾಸ್ ಪ್ರಕ್ರಿಯೆಯು ಅರ್ಧಗಂಟೆ ತಡವಾಗಿ ಆರಂಭವಾಗಿತ್ತು. ಕೊನೆಯ ಅವಧಿಯಲ್ಲಿ ಮಳೆ ಮತ್ತೆ ಪ್ರತ್ಯಕ್ಷವಾಗಿದ್ದು, ದಿನದಾಟದಲ್ಲಿ ಇನ್ನೂ 31 ಓವರ್ಗಳ ಆಟ ಬಾಕಿ ಇರುವಾಗಲೇ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ನಾಯಕ ಬವುಮಾ ನಿರ್ಧಾರವನ್ನು ಸಮರ್ಥಿಸಿಕೊಂಡ ಬೌಲರ್ಗಳು ಮೊದಲ ಅವಧಿಯ ವಾತಾವರಣವನ್ನು ಚೆನ್ನಾಗಿ ಬಳಸಿಕೊಂಡರು.
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಾಗಿಸೊ ರಬಾಡ ಐದು ವಿಕೆಟ್ ಗೊಂಚಲು(5/44) ಪಡೆದು ಮೊದಲ ದಿನದಾಟದಲ್ಲಿ ಮಿಂಚಿದರು. ಚೊಚ್ಚಲ ಪಂದ್ಯವನ್ನಾಡಿದ ಬರ್ಗೆರ್(2-50) ತನ್ನ ಮೊದಲ 13 ಎಸೆತಗಳಲ್ಲಿ ಎರಡು ವಿಕೆಟ್ ಗಳನ್ನು ಉಡಾಯಿಸಿದರು.
ದಿಟ್ಟ ಹೋರಾಟ ನೀಡಿದ ಕೆ.ಎಲ್.ರಾಹುಲ್ ಔಟಾಗದೆ 70 ರನ್(105 ಎಸೆತ, 10 ಬೌಂಡರಿ, 2 ಸಿಕ್ಸರ್)ಗಳಿಸಿ ಬಾಲಂಗೋಚಿ ಮುಹಮ್ಮದ್ ಸಿರಾಜ್(0) ಜೊತೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಆರ್ಭಟಿಸಿದ ರಬಾಡ: ಸಮಕಾಲೀನ ಕ್ರಿಕೆಟ್ನ ಓರ್ವ ಶ್ರೇಷ್ಠ ವೇಗದ ಬೌಲರ್ ಆಗಿರುವ ಕಾಗಿಸೊ ರಬಾಡ ತನ್ನ ಮೊದಲ ಸ್ಪೆಲ್ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾಗೆ(5 ರನ್)ಪೆವಿಲಿಯನ್ ಹಾದಿ ತೋರಿಸಿದ ನಂತರ ಹಳೆ ಚೆಂಡಿನಲ್ಲಿ ವಿರಾಟ್ ಕೊಹ್ಲಿ(38 ರನ್, 64 ಎಸೆತ)ವಿಕೆಟನ್ನು ಉರುಳಿಸಿದರು.
ಈ ಮಧ್ಯೆ ಶ್ರೇಯಸ್ ಅಯ್ಯರ್(31 ರನ್, 50 ಎಸೆತ)ರಕ್ಷಣಾತ್ಮಕ ಆಟದಿಂದ ಗಮನ ಸೆಳೆದರು.
ಹೆಚ್ಚುವರಿ ಬೌನ್ಸ್ ಮೂಲಕ ಅಬ್ಬರಿಸಿದ ರಬಾಡ ಟೆಸ್ಟ್ ಕ್ರಿಕೆಟ್ನಲ್ಲಿ 14ನೇ ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದರು. ರಬಾಡ ಅವರು ರೋಹಿತ್, ಶ್ರೇಯಸ್ ಅಯ್ಯರ್, ಕೊಹ್ಲಿ,ಆರ್.ಅಶ್ವಿನ್(8 ರನ್) ಹಾಗೂ ಶಾರ್ದೂಲ್ ಠಾಕೂರ್(24 ರನ್, 33 ಎಸೆತ)ವಿಕೆಟ್ಗಳನ್ನು ಕಬಳಿಸಿ ಭಾರತದ ಬ್ಯಾಟಿಂಗ್ ಬೆನ್ನುಲುಬು ಮುರಿದರು.
ಭಾರತದ ಪರ ರಾಹುಲ್ ಏಕಾಂಗಿ ಹೋರಾಟ ನೀಡಿದ್ದು ಅವರಿಗೆ ಮತ್ತೊಂದು ತುದಿಯಿಂದ ಸೂಕ್ತ ಸಾಥ್ ಸಿಗಲಿಲ್ಲ.
ಸೀಮಿತ ಓವರ್ ಕ್ರಿಕೆಟ್ನಿಂದ ವಿರಾಮ ಪಡೆದಿದ್ದ ರಬಾಡ, ತನ್ನ ಲಯ ಕಂಡುಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ದೀರ್ಘ ಸ್ಪೆಲ್ ಎಸೆದ ರಬಾಡ ಸ್ವಿಂಗ್ ಜೊತೆಗೆ ಬೌನ್ಸ್ ಮೂಲಕ ಭಾರತದ ಬ್ಯಾಟರ್ಗಳನ್ನು ಕಾಡಿದರು.
ಕೊಹ್ಲಿ ಮೊದಲ ಅವಧಿಯಲ್ಲಿ ನಾಲ್ಕು ರನ್ ಗಳಿಸಿದ್ದಾಗ ಟೋನಿ ಡಿ ರೊರ್ಝಿ ಅವರಿಂದ ಜೀವದಾನ ಪಡೆದರು. ಚೊಚ್ಚಲ ಪಂದ್ಯವನ್ನಾಡಿದ ನಾಂಡ್ರೆ ಬರ್ಗೆರ್(2-39)ವಿಕೆಟ್ ವಂಚಿತರಾದರು.
ಭಾರತವು 12ನೇ ಓವರ್ನಲ್ಲಿ 24 ರನ್ಗೆ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಆಗ ಇನಿಂಗ್ಸ್ ರಿಪೇರಿಗೆ ಮುಂದಾದ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ 4ನೇ ವಿಕೆಟ್ಗೆ 68 ರನ್ ಜೊತೆಯಾಟದಲ್ಲಿ ಭಾಗಿಯಾದರು. ಈ ಜೋಡಿಯನ್ನು ರಬಾಡ ಬೇರ್ಪಡಿಸಿದರು.
ಆತಿಥೇಯ ತಂಡ ಭಾರತವನ್ನು 200 ರನ್ನೊಳಗೆ ನಿಯಂತ್ರಿಸುವ ವಿಶ್ವಾಸದಲ್ಲಿತ್ತು. ಆದರೆ ರಾಹುಲ್ ಇದಕ್ಕೆ ತಡೆಯಾದರು.
ರಾಹುಲ್ ಅವರು ಶಾರ್ದೂಲ್ ಠಾಕೂರ್ ಅವರೊಂದಿಗೆ 7ನೇ ವಿಕೆಟ್ಗೆ 43 ರನ್ ಸೇರಿಸಿ ತಂಡವನ್ನು ಆಧರಿಸಿದರು. ಶಾರ್ದೂಲ್ ವಿಕೆಟನ್ನು ಕಬಳಿಸಿದ ರಬಾಡ ಟೆಸ್ಟ್ನಲ್ಲಿ ಐದು ವಿಕೆಟ್ ಗೊಂಚಲು ಪಡೆದರು. ಜವಾಬ್ದಾರಿಯುತವಾಗಿ ಆಡಿದ ರಾಹುಲ್ ಕ್ಷಿಪ್ರವಾಗಿ 70 ರನ್ ಗಳಿಸಿ ಭಾರತದ ಸ್ಕೋರನ್ನು 200ರ ಗಡಿ ದಾಟಿಸಿದರು.







