ಭಾರತ VS ಶ್ರೀಲಂಕಾ ಮಹಿಳೆಯರ 3ನೇ T20; ಸರಣಿ ಕೈವಶದತ್ತ ಆತಿಥೇಯರ ಚಿತ್ತ

Photo Credit: PTI
ತಿರುವನಂತಪುರಂ, ಡಿ. 25: T20 ಸರಣಿಯ ಮೂರನೇ ಪಂದ್ಯದಲ್ಲಿ ಶುಕ್ರವಾರ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಪ್ರವಾಸಿ ಶ್ರೀಲಂಕಾ ಮಹಿಳಾ ತಂಡವನ್ನು ಎದುರಿಸಲಿದೆ. ಐದು ಪಂದ್ಯಗಳ ಸರಣಿಯನ್ನು ಕೈವಶಪಡಿಸಿಕೊಳ್ಳುವತ್ತ ಪ್ರಬಲ ಭಾರತೀಯ ತಂಡವು ಮುನ್ನಡೆಯುತ್ತಿದೆ.
ಮೊದಲ ಮತ್ತು ದ್ವಿತೀಯ T20 ಪಂದ್ಯಗಳಲ್ಲಿ ಭಾರತೀಯ ಮಹಿಳೆಯರು ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ್ದಾರೆ. ಭಾರತವು ಮೊದಲ ಪಂದ್ಯವನ್ನು ಎಂಟು ವಿಕೆಟ್ ಗಳಿಂದ ಗೆದ್ದರೆ, ಎರಡನೇ ಪಂದ್ಯವನ್ನು ಏಳು ವಿಕೆಟ್ ಗಳಿಂದ ಜಯಿಸಿದೆ.
ಇದು ಶ್ರೀಲಂಕಾ ವಿರುದ್ಧದ ಕಳೆದ 11 T20 ಅಂತರರಾಷ್ಟ್ರಿಯ ಪಂದ್ಯಗಳಲ್ಲಿ ಭಾರತದ ಒಂಭತ್ತನೇ ಗೆಲುವಾಗಿದೆ. 2024 ಜುಲೈಯಲ್ಲಿ ದಾಂಬುಲಾದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವು ಭಾರತದ ವಿರುದ್ಧ ಗೆಲುವು ದಾಖಲಿಸಿತ್ತು.
ಭಾರತವು ಶ್ರೇಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿದೆ. ಮೊದಲಿನ ಎರಡು ಪಂದ್ಯಗಳಲ್ಲಿ ಬೇರೆ ಬೇರೆ ಆಟಗಾರರು ಸಮಯಕ್ಕೆ ಸರಿಯಾದ ನಿರ್ವಹಣೆ ತೋರಿದ್ದಾರೆ. ಆರಂಭಿಕ ಪಂದ್ಯದಲ್ಲಿ ಜೆಮಿಮಾ ರೋಡ್ರಿಗ್ಸ್ ಮಿಂಚಿದರೆ, ಎರಡನೇ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ತನ್ನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದರು.
ಬೌಲರ್ ಗಳು, ಅದರಲ್ಲೂ ಮುಖ್ಯವಾಗಿ ಸ್ಪಿನ್ನರ್ ಗಳು ಉತ್ತಮ ನಿರ್ವಹಣೆ ತೋರಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಶ್ರೀಲಂಕಾ ಮಹಿಳೆಯರನ್ನು 6 ವಿಕೆಟ್ ಗಳ ನಷ್ಟಕ್ಕೆ 121 ರನ್ ಗೆ ನಿಯಂತ್ರಿಸಿದರೆ, ಎರಡನೇ ಪಂದ್ಯದಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 128 ರನ್ ಗೆ ನಿಯಂತ್ರಿಸಿದ್ದಾರೆ. ಯುವ ಬೌಲರ್ ಗಳಾದ ಎನ್. ಶ್ರೀ ಚರಣಿ, ವೈಷ್ಣವಿ ಶರ್ಮಾ ಮತ್ತು ಕ್ರಾಂತಿ ಗೌಡ ಒತ್ತಡವನ್ನು ಸಮಾನವಾಗಿ ಹಂಚಿಕೊಂಡಿದ್ದಾರೆ. ಅವರು ಶಿಸ್ತು ಮತ್ತು ನಿಯಂತ್ರಣದೊಂದಿಗೆ ಬೌಲಿಂಗ್ ಮಾಡಿದ್ದಾರೆ.
ಬೆನ್ನು ಬೆನ್ನಿಗೆ ಅನುಭವಿಸಿದ ಎರಡು ಬೃಹತ್ ಸೋಲುಗಳ ಬಳಿಕ, ಮೈದಾನದ ಬದಲಾವಣೆಯು ತನ್ನ ಪರಿಸ್ಥಿತಿಯಲ್ಲಿ ಬದಲಾವಣೆ ತರಬಹುದು ಎಂಬ ಆಶಯವನ್ನು ಶ್ರೀಲಂಕಾ ಹೊಂದಿದೆ.
ಮೊದಲ ಎರಡು ಪಂದ್ಯಗಳಲ್ಲಿ, ದ್ವೀಪರಾಷ್ಟ್ರ ತಂಡದ ಬ್ಯಾಟಿಂಗ್ ದೃಢತೆಯನ್ನು ಕಳೆದುಕೊಂಡರೆ, ಬೌಲಿಂಗ್ ಮೊನಚು ಕಳೆದುಕೊಂಡಿತ್ತು.
‘‘ಪವರ್ ಪ್ಲೇಯಲ್ಲಿ ನಮ್ಮ ನಿರ್ವಹಣೆ ಚೆನ್ನಾಗಿತ್ತು. ಆದರೆ ಎರಡು ವಿಕೆಟ್ ಗಳನ್ನು ಕಳೆದುಕೊಂಡ ಬಳಿಕ, ಮಧ್ಯಮ ಓವರ್ ಗಳಲ್ಲಿ ನಾವು ಪರದಾಡಿದೆವು’’ ಎಂದು ಎರಡನೇ T20 ಪಂದ್ಯದ ಬಳಿಕ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅತಪತ್ತು ಹೇಳಿದ್ದಾರೆ.
►ಪಂದ್ಯ ಆರಂಭ: ಸಂಜೆ 7 ಗಂಟೆ
►ತಂಡಗಳು
ಭಾರತ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂದಾನ (ಉಪನಾಯಕಿ), ದೀಪ್ತಿ ಶರ್ಮಾ, ಸ್ನೇಹ್ ರಾಣಾ, ಜೆಮಿಮಾ ರೋಡ್ರಿಗ್ಸ್, ಶಫಾಲಿ ವರ್ಮಾ, ಹರ್ಲೀನ್ ದೇವಲ್, ಅಮನ್ಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ, ರೇಣುಕಾ ಸಿಂಗ್ ಠಾಕೂರ್, ರಿಚಾ ಘೋಷ್ (ವಿಕೆಟ್ ಕೀಪರ್), ಜಿ. ಕಮಲಿನಿ (ವಿಕೆಟ್ ಕೀಪರ್), ಎನ್. ಶ್ರೀ ಚರಣಿ, ವೈಷ್ಣವಿ ಶರ್ಮಾ.
ಶ್ರೀಲಂಕಾ: ಚಾಮರಿ ಅತಪತ್ತು (ನಾಯಕಿ), ಹಸಿನಿ ಪೆರೇರ, ವಿಶ್ಮಿ ಗುಣರತ್ನೆ, ಹರ್ಷಿತಾ ಸಮರವಿಕ್ರಮ, ನೀಲಾಕ್ಷಿಕಾ ಡಿ ಸಿಲ್ವ, ಕವಿಶಾ ದಿಲ್ಹಾರಿ, ಇಮೇಶಾ ದುಲಾನಿ, ಕೌಶಿನಿ ನುತ್ಯಾಂಗನಾ, ಮಲ್ಶಾ ಶೆಹಾನಿ, ಇನೋಕಾ ರಣವೀರ, ಶಾಶಿನಿ ಗಿಮ್ಹಾನಿ, ನಿಮೇಶಾ ಮದುಶಾನಿ, ಕಾವ್ಯ ಕವಿಂದಿ, ರಶ್ಮಿಕಾ ಸೆವ್ವಾಂದಿ, ಮಾಲ್ಕಿ ಮದಾರಾ.







