India vs Sri Lanka XI | 4 ಸಿಕ್ಸರ್ ಸಿಡಿಸಿದ ಸಿರಾಜ್: ಭಾರತಕ್ಕೆ 6 ವಿಕೆಟ್ ಗಳ ರೋಚಕ ಜಯ

Photo : x@BCCI
ಕೊಲಂಬೊ, ಆ. 9: ಮುಹಮ್ಮದ್ ಸಿರಾಜ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಭಾರತ ರವಿವಾರ ಆರು ವಿಕೆಟ್ಗಳಿಂದ ರೋಮಾಂಚಕಾರಿಯಾಗಿ ಗೆದ್ದಿದೆ.
ಪಂದ್ಯದ ಮೂರನೇ ಹಾಗೂ ಅಂತಿಮ ದಿನವಾದ ರವಿವಾರ, ದ್ವಿತೀಯ ಇನಿಂಗ್ಸ್ ನಲ್ಲಿ ಗೆಲುವಿಗೆ 207 ರನ್ ಗಳ ಗುರಿಯನ್ನು ಪಡೆದ ಭಾರತಕ್ಕೆ ಯಶಸ್ವಿ ಜೈಸ್ವಾಲ್ (61) ಮತ್ತು ಶುಭಮನ್ ಗಿಲ್ (44) ಉತ್ತಮ ಆರಂಭವನ್ನು ನೀಡಿದರು. ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೆ 100 ಆಗಿದ್ದಾಗ ಯಶಸ್ವಿ ಜೈಸ್ವಾಲ್ ನಿವೃತ್ತರಾದರು.
ಬಳಿಕ ಶ್ರೀಲಂಕಾವು ನಿಯಮಿತ ಅಂತರದಲ್ಲಿ ಭಾರತದ ವಿಕೆಟ್ ಗಳನ್ನು ಉರುಳಿಸಿತು ಹಾಗೂ ಪಂದ್ಯವನ್ನು ಡ್ರಾಗೊಳಿಸುವ ನಿಟ್ಟಿನಲ್ಲಿ ಮುನ್ನುಗ್ಗುತ್ತಿತ್ತು.
ಆದರೆ, ಸಿರಾಜ್ ಅವರ ಯೋಚನೆ ಬೇರೆಯೇ ಆಗಿತ್ತು! ಅವರು ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿ ಇನ್ನೂ ಮೂರು ಎಸೆತಗಳು ಬಾಕಿಯಿರುವಂತೆಯೇ ಭಾರತವನ್ನು ವಿಜಯದ ಗುರಿ ಮುಟ್ಟಿಸಿದರು. ಅವರು ಕೇವಲ 15 ಎಸೆತಗಳಲ್ಲಿ 32 ರನ್ ಗಳನ್ನು ಸಿಡಿಸಿದರು.
ಭಾರತವು ನಾಲ್ಕು ವಿಕೆಟ್ಗಳ ನಷ್ಟಕ್ಕೆ 214 ರನ್ ಗಳನ್ನು ಗಳಿಸಿತು.
ಇದಕ್ಕೂ ಮೊದಲು, ಶ್ರೀಲಂಕಾ ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 200 ರನ್ ಗಳಿಸಿ ಡಿಕ್ಲೇರ್ ಮಾಡಿತು.
ಈ ಪಂದ್ಯದೊಂದಿಗೆ, ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತೀಯ ಆಟಗಾರರು ಅಮೂಲ್ಯ ಪಂದ್ಯಾನುಭವವನ್ನು ಪಡೆದುಕೊಂಡರು.
ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 15ರಂದು ಆರಂಭಗೊಳ್ಳಲಿದೆ.






