2ನೇ ಟೆಸ್ಟ್ | ಶುಭಮನ್ ಗಿಲ್ ಶತಕ; ಸಂಕಷ್ಟದಲ್ಲಿ ವಿಂಡಿಸ್

Photo : NDTV
ಹೊಸದಿಲ್ಲಿ, ಅ. 11: ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಎರಡನೇ ದಿನವಾದ ಶನಿವಾರ, ನಾಯಕ ಶುಭಮನ್ ಗಿಲ್ ರ ಅಜೇಯ ಶತಕ ಮತ್ತು ಸ್ಪಿನ್ನರ್ಗಳ ಆಕ್ರಮಣಕಾರಿ ದಾಳಿಯ ಮೂಲಕ ಭಾರತ ಪ್ರಬಲ ಸ್ಥಿತಿಯಲ್ಲಿದೆ.
ಭಾರತವು ತನ್ನ ಮೊದಲ ಇನಿಂಗ್ಸನ್ನು ಐದು ವಿಕೆಟ್ ಗಳ ನಷ್ಟಕ್ಕೆ 518ಕ್ಕೆ ಡಿಕ್ಲೇರ್ ಮಾಡಿತು. ಭಾರತದ ಬೃಹತ್ ಮೊದಲ ಇನಿಂಗ್ಸ್ ಮೊತ್ತಕ್ಕೆ ಉತ್ತರಿಸಿದ ವೆಸ್ಟ್ ಇಂಡೀಸ್ ತನ್ನ ಮೊದಲ ಇನಿಂಗ್ಸ್ನಲ್ಲಿ ಸ್ಪಿನ್ನರ್ಗಳ ದಾಳಿಗೆ ನಲುಗಿದೆ. ಎರಡನೇ ದಿನದಾಟದ ಕೊನೆಗೆ ವೆಸ್ಟ್ ಇಂಡೀಸ್ ತನ್ನ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ಗಳ ನಷ್ಟಕ್ಕೆ 140 ರನ್ ಗಳಿಸಿದೆ. ಈ ಮೂಲಕ ಅದು ಭಾರತದ ಮೊದಲ ಇನಿಂಗ್ಸ್ ಮೊತ್ತಕ್ಕಿಂತ 378 ರನ್ಗಳ ಹಿನ್ನಡೆಯಲ್ಲಿದೆ. 31 ರನ್ ಗಳಿಸಿರುವ ಶಾಯ್ ಹೋಪ್ ಮತ್ತು 14 ರನ್ ಮಾಡಿರುವ ಟೆವಿನ್ ಇಮ್ಲಾಕ್ ಕ್ರೀಸ್ನಲ್ಲಿದ್ದಾರೆ.
ದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಮೂರು ವಿಕೆಟ್ಗಳನ್ನು ಉರುಳಿಸಿದರು.
ಅಜೇಯ 129 ರನ್ ಗಳಿಸಿದ ಶುಭಮನ್ ಗಿಲ್ ಶ್ರೇಷ್ಠ ನಾಯಕತ್ವವನ್ನು ಪ್ರದರ್ಶಿಸಿದರು. ಅವರು ಈ ವರ್ಷದಲ್ಲಿ ಆಡಿದ ಎಂಟು ಟೆಸ್ಟ್ಗಳಲ್ಲಿ ಐದನೇ ಶತಕವನ್ನು ಬಾರಿಸಿದರು. ಇದು ಅವರ ಒಟ್ಟಾರೆ 10ನೇ ಟೆಸ್ಟ್ ಶತಕವಾಗಿದೆ.
ಎರಡನೇ ದಿನದಾಟ ಆರಂಭಗೊಂಡ ಸ್ವಲ್ಪವೇ ಹೊತ್ತಿನಲ್ಲಿ, ಮುನ್ನಾ ದಿನ 173 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಜೈಸ್ವಾಲ್ ತನ್ನ ಖಾತೆಗೆ ಎರಡು ರನ್ಗಳನ್ನು ಸೇರಿಸುವಷ್ಟರಲ್ಲಿ ರನೌಟ್ ಆಗಿ ಮರಳಿದರು.
ಮುನ್ನಾ ದಿನ 20 ರನ್ ಗಳಿಸಿ ಕ್ರೀಸ್ನಲ್ಲಿದ್ದ ಗಿಲ್ (129) ಅಮೋಘ ಬ್ಯಾಟಿಂಗ್ ಪಾಂಡಿತ್ಯವನ್ನು ಪ್ರದರ್ಶಿಸಿ ತನ್ನ 10ನೇ ಟೆಸ್ಟ್ ಶತಕವನ್ನು ಬಾರಿಸಿದರು. ಅವರ ಇನಿಂಗ್ಸ್ನಲ್ಲಿ 16 ಬೌಂಡರಿಗಳು ಮತ್ತು ಎರಡು ಸಿಕ್ಸರ್ಗಳಿದ್ದವು.
ಗಿಲ್, ಧ್ರುವ ಜೂರೆಲ್ (44) ಜೊತೆಗೆ 102 ರನ್ಗಳ ಭಾಗೀದಾರಿಕೆ ನಿಭಾಯಿಸಿದರು. ಬಳಿಕ, ಗಿಲ್ ನಿತೀಶ್ ಕುಮಾರ್ ರೆಡ್ಡಿ (43) ಜೊತೆಗೂ 91 ರನ್ಗಳ ಭಾಗೀದಾರಿಕೆ ನೆರವೇರಿಸಿದರು.
ವೆಸ್ಟ್ ಇಂಡೀಸ್ನ ಮೊದಲ ಇನಿಂಗ್ಸ್ನಲ್ಲಿ ತೇಗನಾರಾಯಣ್ ಚಂದ್ರಪಾಲ್ (34) ಮತ್ತು ಆ್ಯಲಿಕ್ ಆ್ಯತನೇಝ್ (41) ಭಾರತೀಯ ದಾಳಿಗೆ ಕೊಂಚ ಪ್ರತಿರೋಧ ತೋರಿದರು. ಚಂದ್ರಪಾಲ್ರನ್ನು ಜಡೇಜ ಔಟ್ ಮಾಡಿದರೆ, ಆ್ಯತನೇಝ್ರ ವಿಕೆಟನ್ನು ಯಾದವ್ ಪಡೆದರು.
ಜಡೇಜ ತನ್ನ ಮುಂದಿನ ಓವರ್ನಲ್ಲೇ ರೋಸ್ಟನ್ ಚೇಸ್ರನ್ನು ಶೂನ್ಯಕ್ಕೆ ವಾಪಸ್ ಕಳುಹಿಸಿದರು.







