ಎರಡನೇ FIH ಮಹಿಳೆಯರ ನೇಶನ್ಸ್ ಕಪ್ ಗೆದ್ದ ಭಾರತ; ನ್ಯೂಝಿಲ್ಯಾಂಡ್ ವಿರುದ್ಧ ಜಯ

Photo : x@TheHockeyIndia
ಹೊಸದಿಲ್ಲಿ, ಜೂ.21: ಆತಿಥೇಯ ನ್ಯೂಝಿಲ್ಯಾಂಡ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿ ಅಜೇಯ ಓಟವನ್ನು ಮುಂದುವರಿಸಿರುವ ಭಾರತ ತಂಡವು ರವಿವಾರ ಎಫ್ಐಎಚ್ ಮಹಿಳೆಯರ ನೇಶನ್ಸ್ ಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಈ ಗೆಲುವಿನೊಂದಿಗೆ ಭಾರತ ತಂಡವು ಮುಂದಿನ ವರ್ಷದ ಎಫ್ಐಎಚ್ ಮಹಿಳೆಯರ ಪ್ರೊ ಲೀಗ್ಗೆ ಅರ್ಹತೆ ಪಡೆದುಕೊಂಡಿದೆ.
2022ರಲ್ಲಿ ನಡೆದ ಮೊದಲ ಆವೃತ್ತಿಯ ಟೂರ್ನಿಯನ್ನು ಗೆದ್ದಿದ್ದ ಭಾರತಕ್ಕೆ ಇದು ಎರಡನೇ ನೇಶನ್ಸ್ ಕಪ್ ಟ್ರೋಫಿಯಾಗಿದೆ.
ನವನೀತ್ ಕೌರ್ ನಾಲ್ಕನೇ ನಿಮಿಷದಲ್ಲಿ ಪವರ್ಫುಲ್ ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲು ಗಳಿಸಿದರೆ, ಸುನೆಲಿತಾ ಟೊಪ್ಪೊ 15ನೇ ನಿಮಿಷದಲ್ಲಿ ಮುನ್ನಡೆಯನ್ನು ದ್ವಿಗುಣಗೊಳಿಸಿದರು.
ಭಾರತ ತಂಡವು ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿತು. ಸೆಮಿಫೈನಲ್ ನಲ್ಲಿ ಚಿಲಿ ತಂಡವನ್ನು 5-0 ಗೋಲುಗಳಿಂದ ಮಣಿಸುವ ಮೊದಲು, ಗ್ರೂಪ್ ಹಂತದಲ್ಲಿ ಅಮೆರಿಕ, ಜಪಾನ್ ಹಾಗೂ ಉರುಗ್ವೆ ತಂಡಗಳನ್ನು ಸೋಲಿಸಿತ್ತು.
ದೀಪಿಕಾ ಆರು ಗೋಲುಗಳನ್ನು ಗಳಿಸಿ ಅಮೆರಿಕದ ಅಶ್ಲೆ ಸೆಸ್ಸಾ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡರು. ಫೈನಲ್ ನಲ್ಲಿ ಲಾಲ್ರೆಂಸಿಯಾಮಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾರತ ತಂಡದ ಸಾಧನೆಯನ್ನು ಸಂಭ್ರಮಿಸಿದ ಹಾಕಿ ಇಂಡಿಯಾವು ಪ್ರತಿ ಆಟಗಾರ್ತಿಗೆ ತಲಾ 3 ಲಕ್ಷ ರೂ. ಹಾಗೂ ಸಹಾಯಕ ಸಿಬ್ಬಂದಿಯ ಪ್ರತಿ ಸದಸ್ಯರಿಗೆ 1.5 ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದೆ.






