ವಿಶ್ವಕಪ್: ಗೆಲುವಿನ ನಾಗಾಲೋಟ ಮುಂದುವರಿಸಿದ ಭಾರತ
ಕಿವೀಸ್ ಗೆ ಟೂರ್ನಿಯಲ್ಲಿ ಮೊದಲ ಸೋಲು

Photo: X/ICC
ಧರ್ಮಶಾಲ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತ 4 ವಿಕೆಟ್ ಗಳ ಜಯ ಗಳಿಸಿದೆ.
ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ನೆರವಿನಿಂದ ಟೂರ್ನಿಯಲ್ಲಿ ಸತತ ನಾಲ್ಕು ಜಯ ಗಳಿಸಿದ್ದ ನ್ಯೂಝಿಲ್ಯಾಂಡ್ ತಂಡಕ್ಕೆ ಸೋಲುಣಿಸುವುದರ ಮೂಲಕ ಭಾರತ ತನ್ನ ಅಜೇಯ ಓಟ ಮುಂದುವರಿಸಿದೆ. ಭಾರತದ ಪರ ಮುಹಮ್ಮದ್ ಶಮಿ ಐದು ವಿಕೆಟ್ ಪಡೆದು ದಾಖಲೆ ಬರೆದರು.
ಸತತ 5ನೇ ಗೆಲುವು ದಾಖಲಿಸಿದ ಭಾರತ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.
ನ್ಯೂಝಿಲ್ಯಾಂಡ್ ಪರ ಡ್ಯಾರಿಲ್ ಮಿಚೆಲ್ ಆಕರ್ಷಕ ಶತಕ ಹಾಗೂ ರಚಿನ್ ರವೀಂದ್ರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 273 ರನ್ ಪೇರಿಸಿತು. ಕಿವೀಸ್ ನೀಡಿದ 274 ರನ್ ಬೆನ್ನತ್ತಿದ ಭಾರತ ಮೊದಲ ವಿಕೆಟ್ ನಷ್ಟಕ್ಕೆ 71 ರನ್ ಜೊತೆಯಾಟ ಆಡಿತು. ನಾಯಕ ರೋಹಿತ್ ಶರ್ಮಾ 4 ಬೌಂಡರಿ 4 ಸಿಕ್ಸರ್ ಸಹಿತ 46 ರನ್ ಗಳಿಸಿದರೆ ಅವರಿಗೆ ಸಾಥ್ ನೀಡಿದ್ದ ಶುಬ್ ಮನ್ ಗಿಲ್ 26 ರನ್ ಬಾರಿಸಿ ಕ್ರಮವಾಗಿ ಲೋಕಿ ಫರ್ಗ್ಯುಸನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಬ್ಯಾಟಿಂಗ್ ಗೆ ಬಂದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್, ಬ್ಯಾಟ್ ಮಾಡುತ್ತಿದ್ದ ಸಂದರ್ಭ ದಟ್ಟ ಮಂಜು ಕಾಣಿಸಿಕೊಂಡಿದ್ದರಿಂದ ಕೆಲ ಸಮಯ ಪಂದ್ಯ ನಿಲ್ಲಿಸಲಾಯಿತು. ವಿರಾಮದ ಬಳಿಕ ಕ್ರೀಸ್ ಗೆ ಬಂದ ಶ್ರೇಯಸ್ ಅಯ್ಯರ್ 33 ರನ್ ಗೆ ಟ್ರೆಂಟ್ ಬೌಲ್ಟ್ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರೆ ಕೆ.ಎಲ್. ರಾಹುಲ್ 27 ರನ್ ಗಳಿಸಿರುವಾಗ ಮಿಷೆಲ್ ಸಾಂಟ್ನರ್ ಎಲ್ ಬಿಡಬ್ಲೂ ಬಲೆಗೆ ಬಿದ್ದರು. ತಂಡವನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿದ್ದ ವಿರಾಟ್ ಕೊಹ್ಲಿ 8 ಬೌಂಡರಿ 2 ಸಿಕ್ಸರ್ ಸಹಿತ ಆಕರ್ಷಕ 96 ಬಾರಿಸಿ 4 ರನ್ ಗಳಿಂದ ಶತಕ ವಂಚಿತರಾದರು. ಟೂರ್ನಿಯಲ್ಲಿ ಮೊದಲ ಪಂದ್ಯ ಆಡಿದ ಸೂರ್ಯಕುಮಾರ್ 2 ರನ್ ಗಳಿಸಿ ರನ್ ಓಡುವ ಭರದಲ್ಲಿ ರನೌಟ್ ಆದರು. ರವೀಂದ್ರ ಜಡೇಜಾ 39 ರನ್ ಗಳಿಸಿದರೆ ಶಮಿ 1 ರನ್ ಕೊಡುಗೆ ನೀಡಿದರು.
ನ್ಯೂಝಿಲ್ಯಾಂಡ್ ಪರ ಲೋಕಿ ಫರ್ಗ್ಯುಸನ್ 2 ವಿಕೆಟ್ ಪಡೆದರೆ ಟ್ರೆಂಟ್ ಬೌಲ್ಟ್, ಮಿಷೆಲ್ ಸಾಂಟ್ನರ್, ಮ್ಯಾಟ್ ಹೆನ್ರಿ ತಲಾ ಒಂದು ವಿಕೆಟ್ ಪಡೆದರು.
ಈ ಮೊದಲು ನ್ಯೂಝಿಲ್ಯಾಂಡ್ ವಿರುದ್ಧ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡು ಕಿವೀಸ್ ಗೆ ಬ್ಯಾಟಿಂಗ್ ಆಹ್ವಾನ ನೀಡಿತ್ತು. ಬ್ಯಾಟಿಂಗ್ ಗೆ ಇಳಿದ ಕಿವೀಸ್ ನ ಆರಂಭಿಕ ಬ್ಯಾಟರ್ ಗಳಾದ ಡೇವಾನ್ ಕಾನ್ವೆ ಶೂನ್ಯಕ್ಕೆ ಹಾಗೂ ವಿಲ್ ಯಂಗ್ ರನ್ನು 17 ರನ್ ಗೆ ಔಟ್ ಮಾಡುವ ಮೂಲಕ ಮುಹಮ್ಮದ್ ಸಿರಾಜ್ ಮತ್ತು ಶಮಿ ಆಘಾತ ನೀಡಿದರು. ಟೂರ್ನಿಯಲ್ಲಿ ಮೊದಲ ಪಂದ್ಯ ಆಡುತ್ತಿರುವ ಮುಹಮ್ಮದ್ ಶಮಿ ತಾನು ಎಸೆದ ಮೊದಲ ಬಾಲ್ ನಲ್ಲಿಯೇ ವಿಲ್ ಯಂಗ್ ರನ್ನು ಬೌಲ್ಡ್ ಮಾಡುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದರು. ಕೇವಲ 19 ರನ್ ಗೆ 2 ಪ್ರಮುಖ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಕಿವೀಸ್ ಗೆ ಡ್ಯಾರಿಲ್ ಮಿಚೆಲ್ ಹಾಗೂ ರಚಿನ್ ರವೀಂದ್ರ ಜೋಡಿ ನಿಯಮಿತ ಅಂತರದಲ್ಲಿ ಬೌಂಡರಿ ಸಿಕ್ಸರ್ ಸಿಡಿಸುವ ಮೂಲಕ ಭಾರತದ ಸಂಘಟಿತ ಬೌಲಿಂಗ್ ದಾಳಿಯನ್ನು ನಿಭಾಯಿಸಿದರು. ರಚಿನ್ ರವೀಂದ್ರ 6 ಬೌಂಡರಿ 1 ಸಿಕ್ಸರ್ ಸಹಿತ 75 ರನ್ ಬಾರಿಸಿ ಮುಹಮ್ಮದ್ ಶಮಿ ಬೌಲಿಂಗ್ ನಲ್ಲಿ ಶುಭ ಮನ್ ಗಿಲ್ ಗೆ ಕ್ಯಾಚ್ ನೀಡಿ ಔಟ್ ಆದರೆ ನಾಯಕ ಟಾಮ್ ಲ್ಯಾಥಮ್ 5 ರನ್ ಗೆ ಕುಲದೀಪ್ ಬೌಲಿಂಗ್ ನಲ್ಲಿ ಎಲ್ ಬಿ ಡಬ್ಲೂ ಆದರು. ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಡ್ಯಾರಿಲ್ ಮಿಚೆಲ್ 9 ಬೌಂಡರಿ 5 ಸಿಕ್ಸರ್ ನೆರವಿನಿಂದ 130 ಬಾರಿಸಿದರು. ಗ್ಲೆನ್ ಫಿಲಿಪ್ಸ್ 23, ಮಾರ್ಕ್ ಚಾಪ್ಮನ್ 6, ಮಿಷೆಲ್ ಸಾಂಟ್ನರ್ 1, ಮ್ಯಾಟ್ ಹೆನ್ರಿ 0, ಲೋಕಿ ಫರ್ಗುಸನ್ 1 ರನ್ ಗಳಿಸಿದರು.
ಭಾರತದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮುಹಮ್ಮದ್ ಶಮಿ 5 ವಿಕೆಟ್ ಪಡೆದರೆ ಕುಲದೀಪ್ ಯಾದವ್ 2 ವಿಕೆಟ್, ಬೂಮ್ರ, ಸಿರಾಜ್ ತಲಾ ಒಂದು ವಿಕೆಟ್ ಕಬಳಿಸಿದರು.
20 ವರ್ಷಗಳ ನಂತರ ಗೆಲುವು
ಭಾರತ 20 ವರ್ಷಗಳ ನಂತರ ಐಸಿಸಿ ಟೂರ್ನಮೆಂಟ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಗೆಲುವು ದಾಖಲಿಸಿದೆ. ಈ ಗೆಲುವಿನ ಮಲಕ ರೋಹಿತ್ ಬಳಗವು 2019ರ ವಿಶ್ವಕಪ್ ಸೆಮಿ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಟೀಮ್ ಇಂಡಿಯಾವು ಐಸಿಸಿ ಟೂರ್ನಿಗಳಲ್ಲಿ ಕಿವೀಸ್ ವಿರುದ್ಧ 2003ರಿಂದ ಯಾವುದೇ ಪಂದ್ಯವನ್ನು ಗೆದ್ದುಕೊಂಡಿಲ್ಲ. 2021ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತವು ಕಿವೀಸ್ ವಿರುದ್ಧ ಸೋಲುಂಡಿತ್ತು.
2019ರ ವಿಶ್ವಕಪ್ನ ಸೆಮಿ ಫೈನಲ್ನಲ್ಲಿ 240 ರನ್ ಚೇಸ್ ವೇಳೆ ಭಾರತವು ಸೋಲನುಭವಿಸಿತ್ತು.







