ಶ್ರೀಲಂಕಾ ಮಣಿಸಿ ಎಂಟನೇ ಬಾರಿ ಏಷ್ಯಾ ಕಪ್ ಗೆದ್ದ ಭಾರತದ ವನಿತೆಯರು
72 ರನ್ಗಳ ಭರ್ಜರಿ ಗೆಲುವು; 'ಮಿಂಚಿದ' ಶ್ರೀ ಚರಣಿ 4, ದೀಪ್ತಿಗೆ 3 ವಿಕೆಟ್

Photo Credit : X@BCCIWomen
ದುಬೈ, ಸೆ. 13: ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಅವರ ಸ್ಫೋಟಕ ಅರ್ಧಶತಕಗಳ ನೆರವಿನಿಂದ 183 ರನ್ ಗಳ ಬೃಹತ್ ಮೊತ್ತ ಕಲೆಹಾಕಿದ ಭಾರತ, ಬೌಲರ್ ಗಳ ಸಂಘಟಿತ ದಾಳಿಯ ಬಲದಿಂದ ಶ್ರೀಲಂಕಾವನ್ನು 72 ರನ್ಗಳಿಂದ ಮಣಿಸಿ ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಎಂಟನೇ ಬಾರಿ ಚಾಂಪಿಯನ್ ಆಯಿತು.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಫೈನಲ್ನಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು.
ಭಾರತದ ಆರಂಭಿಕರಾದ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದರು. ಮಂಧನಾ 39 ಎಸೆತಗಳಲ್ಲಿ 59 ರನ್ ಗಳಿಸಿದರೆ, ಶಫಾಲಿ 39 ಎಸೆತಗಳಲ್ಲಿ 68 ರನ್ ಗಳಿಸಿದರು. ಇಬ್ಬರೂ ಮೊದಲ ವಿಕೆಟ್ ಗೆ 129 ರನ್ಗಳ ಜೊತೆಯಾಟ ನೀಡಿದರು. ಈ ಬಲಿಷ್ಠ ಆರಂಭದಿಂದ ಭಾರತ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಯಿತು.
184 ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಆರಂಭದಲ್ಲೇ ಇಶಾನಿ ದುಲಾನಿ (4) ಅವರ ವಿಕೆಟ್ ಕಳೆದುಕೊಂಡಿತು. ನಾಯಕಿ ಚಮರಿ ಅಥಾಪತ್ತು 32 ಎಸೆತಗಳಲ್ಲಿ 36 ರನ್ ಗಳಿಸಿ ತಂಡವನ್ನು ಮುನ್ನಡೆಸುವ ಪ್ರಯತ್ನ ಮಾಡಿದರು. ವಿಸ್ಮಿ ಗುಣರತ್ನೆ 22 ಎಸೆತಗಳಲ್ಲಿ 20 ರನ್ ಗಳಿಸಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಶ್ರೀಲಂಕಾದ ಬ್ಯಾಟಿಂಗ್ ಕುಸಿಯಿತು.
ನಿಲಕ್ಷಿಕಾ ಡಿ ಸಿಲ್ವಾ 16 ಎಸೆತಗಳಲ್ಲಿ 22 ರನ್ ಗಳಿಸಿ ಹೋರಾಟ ನಡೆಸಿದರು. ಹರ್ಷಿತಾ ಸಮರವಿಕ್ರಮ 14 ಎಸೆತಗಳಲ್ಲಿ 9, ಕವಿಶಾ ದಿಲ್ಹರಿ 5 ಎಸೆತಗಳಲ್ಲಿ 7, ಹಸಿನಿ ಪೆರೇರಾ 3 ಎಸೆತಗಳಲ್ಲಿ 1, ಕೌಶಿನಿ ನುತ್ಯಂಗನ 14 ಎಸೆತಗಳಲ್ಲಿ 9 ಮತ್ತು ಸುಗಂಧಿಕಾ ಕುಮಾರಿ 7 ಎಸೆತಗಳಲ್ಲಿ 1 ರನ್ ಗಳಿಸಿದರು. ಎಂ.ಎ. ಬಂಡಾರ ಶೂನ್ಯಕ್ಕೆ ಔಟಾದರು. ಎಚ್.ಎಂ.ಸಿ. ಪ್ರಬೋಧ್ ಔಟಾಗದೆ ಉಳಿದರು. ಇದಲ್ಲದೆ ಹೆಚ್ಚುವರಿಯಾಗಿ 2 ರನ್ ಬಂದವು.
ಶ್ರೀಲಂಕಾ 20 ಓವರ್ ಗಳಲ್ಲಿ 111 ರನ್ಗಳಿಗೆ ಆಲೌಟ್ ಆಯಿತು.
ಭಾರತದ ಬೌಲಿಂಗ್ ನಲ್ಲಿ ಶ್ರೀ ಚರಣಿ ಮಿಂಚಿದರು. ನಾಲ್ಕು ಓವರ್ ಗಳಲ್ಲಿ ಒಂದು ಮೇಡನ್ ಸಹಿತ 20 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ದೀಪ್ತಿ ಶರ್ಮಾ ನಾಲ್ಕು ಓವರ್ ಗಳಲ್ಲಿ 19 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಕ್ರಾಂತಿ ಗೌಡ್ 2 ಓವರ್ ಗಳಲ್ಲಿ 8 ರನ್ ನೀಡಿ ಒಂದು ವಿಕೆಟ್ ಪಡೆದರು. ಶಫಾಲಿ ವರ್ಮಾ ಮತ್ತು ಪ್ರೇಮಾ ರಾವತ್ ತಲಾ ಒಂದು ವಿಕೆಟ್ ಪಡೆದರು.
ಶ್ರೀಲಂಕಾದ ವಿಕೆಟ್ ಗಳು ನಿಯಮಿತ ಅಂತರದಲ್ಲಿ ಉರುಳಿದವು. 62 ರನ್ ಗೆ ಎರಡನೇ ವಿಕೆಟ್, 63ಕ್ಕೆ ಮೂರನೇ ವಿಕೆಟ್ ಹಾಗೂ 86 ರನ್ ಗೆ ನಾಲ್ಕನೇ ವಿಕೆಟ್ ಪತನಗೊಂಡಿತು. ನಂತರ 100, 101, 103, 104 ಮತ್ತು 107 ರನ್ ಗೆ ವಿಕೆಟ್ ಗಳು ಉರುಳಿದವು. ಅಂತಿಮವಾಗಿ 20ನೇ ಓವರ್ ನಲ್ಲಿ 111 ರನ್ ಗಳಿಗೆ ಶ್ರೀಲಂಕಾದ ಇನಿಂಗ್ಸ್ ಅಂತ್ಯಗೊಂಡಿತು.
ಈ ಗೆಲುವಿನೊಂದಿಗೆ ಭಾರತ ಮಹಿಳಾ ಏಷ್ಯಾ ಕಪ್ ನಲ್ಲಿ ಎಂಟನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.






