ಕಳೆದ 12 ವಿಶ್ವಕಪ್ ಟೂರ್ನಿಗಳಲ್ಲಿ ಗರಿಷ್ಠ ರನ್ ಗಳಿಸಿದ ಭಾರತದ ಬ್ಯಾಟರ್ ಗಳು

ಫೈಲ್ ಫೋಟೋ | photo courtesy: icc
ಹೊಸದಿಲ್ಲಿ, ಅ.3: ಭಾರತವು ಇದೇ ಮೊದಲ ಬಾರಿ ಏಕಾಂಗಿಯಾಗಿ ಏಕದಿನ ವಿಶ್ವಕಪ್ ಆತಿಥ್ಯವನ್ನು ವಹಿಸುತ್ತಿದ್ದು, ಕ್ರಿಕೆಟ್ ಹಬ್ಬ ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಭಾರತ ಈ ತನಕ 2 ಬಾರಿ ವಿಶ್ವ ಚಾಂಪಿಯನ್ ಆಗಿದ್ದು, ಮೂರನೇ ಬಾರಿ ಪ್ರಶಸ್ತಿ ಎತ್ತಲು ಹವಣಿಸುತ್ತಿದೆ. ಈ ತನಕ ನಡೆದಿರುವ ವಿಶ್ವಕಪ್ ಟೂರ್ನಿಯ 12 ಆವೃತ್ತಿಗಳಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಗಳತ್ತ ಒಂದು ನೋಟ….
1975: ಸುನೀಲ್ ಗವಾಸ್ಕರ್: 113 ರನ್
ಇಂಗ್ಲೆಂಡ್ ನಲ್ಲಿ 1975ರಲ್ಲಿ ನಡೆದ ಮೊದಲ ಆವೃತ್ತಿಯ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಲೆಜೆಂಡರಿ ಸುನೀಲ್ ಗವಾಸ್ಕರ್ ಭಾರತದ ಪರ ಗರಿಷ್ಟ ರನ್ ಗಳಿಸಿದ್ದರು. ಗವಾಸ್ಕರ್ 3 ಪಂದ್ಯಗಳಲ್ಲಿ ಒಟ್ಟು 113 ರನ್ ಗಳಿಸಿದ್ದು, ಔಟಾಗದೆ 65 ಗರಿಷ್ಟ ವೈಯಕ್ತಿಕ ಸ್ಕೋರಾಗಿತ್ತು.
1979: ಗುಂಡಪ್ಪ ವಿಶ್ವನಾಥ್: 106 ರನ್
ಮಾಜಿ ಬಲಿಷ್ಠ ಬ್ಯಾಟರ್ ಗುಂಡಪ್ಪ ವಿಶ್ವನಾಥ್ 1979ರ ವಿಶ್ವಕಪ್ ನಲ್ಲಿ ಗರಿಷ್ಟ ರನ್ ಗಳಿಸಿದ ಭಾರತೀಯ ಬ್ಯಾಟರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ವಿಶ್ವನಾಥ್ 3 ಪಂದ್ಯಗಳಲ್ಲಿ 106 ರನ್ ಗಳಿಸಿದ್ದು, ಗರಿಷ್ಟ ಸ್ಕೋರ್ 75.
1983: ಕಪಿಲ್ ದೇವ್: 303 ರನ್
ಕಪಿಲ್ ದೇವ್ ನಾಯಕತ್ವದಲ್ಲಿ ಭಾರತವು 1983ರಲ್ಲಿ ಚೊಚ್ವಲ ವಿಶ್ವಕಪ್ ಜಯಿಸಿತ್ತು. ಆಗ ಕಪಿಲ್ ದೇವ್ ಭಾರತದ ಪರ ಅಮೋಘ ಪ್ರದರ್ಶನ ನೀಡಿದ್ದರು. ಝಿಂಬಾಬ್ವೆ ವಿರುದ್ಧ ಗಳಿಸಿರುವ ಅಜೇಯ 175 ರನ್ ಈಗಲೂ ಒಂದು ಶ್ರೇಷ್ಠ ಇನಿಂಗ್ಸ್ ಆಗಿ ಉಳಿದುಕೊಂಡಿದೆ. ಕಪಿಲ್ 8 ಪಂದ್ಯಗಳಲ್ಲಿ 303 ರನ್ ಗಳಿಸಿದ್ದರು. ಕಪಿಲ್ ಏಕದಿನ ಕ್ರಿಕೆಟ್ ನಲ್ಲಿ ಶತಕವನ್ನು ಸಿಡಿಸಿದ್ದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
1987: ಸುನೀಲ್ ಗವಾಸ್ಕರ್: 300 ರನ್
1987ರ ವಿಶ್ವಕಪ್ ನಲ್ಲಿ ಸುನೀಲ್ ಗವಾಸ್ಕರ್ ಮತ್ತೊಮ್ಮೆ ಭಾರತಕ್ಕೆ ಆಸರೆಯಾಗಿದ್ದರು. ಗವಾಸ್ಕರ್ 7 ಪಂದ್ಯಗಳಲ್ಲಿ 300 ರನ್ ಗಳಿಸಿದ್ದು, ಔಟಾಗದೆ 103 ಗರಿಷ್ಟ ವೈಯಕ್ತಿಕ ಸ್ಕೋರಾಗಿತ್ತು.
1992: ಮುಹಮ್ಮದ್ ಅಝರುದ್ದೀನ್: 332 ರನ್
ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ 1992ರಲ್ಲಿ ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ನ ಜಂಟಿ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್ ನಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ್ದರು. ಅಝರ್ 8 ಪಂದ್ಯಗಳಲ್ಲಿ ಒಟ್ಟು 332 ರನ್ ಗಳಿಸಿದ್ದರು. 93 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.
1996: ಸಚಿನ್ ತೆಂಡುಲ್ಕರ್: 523 ರನ್
1996ರ ವಿಶ್ವಕಪ್ ನಲ್ಲಿ ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಅವರು 7 ಪಂದ್ಯಗಳಲ್ಲಿ ಒಟ್ಟು 523 ರನ್ ಗಳಿಸಿದ್ದರು. ಟೂರ್ನಮೆಂಟ್ ನಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಎಂಬ ಹಿರಿಮೆಗೂ ಪಾತ್ರರಾಗಿದ್ದರು.
1999: ರಾಹುಲ್ ದ್ರಾವಿಡ್:461 ರನ್
1999ರ ವಿಶ್ವಕಪ್ ನಲ್ಲಿ ರಾಹುಲ್ ದ್ರಾವಿಡ್ ಭಾರತದ ಪರ ಹೆಚ್ಚು ರನ್ ಗಳಿಸಿದ್ದರು. ದ್ರಾವಿಡ್ 8 ಪಂದ್ಯಗಳಲ್ಲಿ ಒಟ್ಟು 461 ರನ್ ಗಳಿಸಿದ್ದು, 145 ಗರಿಷ್ಠ ಸ್ಕೋರಾಗಿತ್ತು.
2003: ಸಚಿನ್ ತೆಂಡುಲ್ಕರ್: 673 ರನ್
2003ರ ಆವೃತ್ತಿಯಲ್ಲೂ ಸಚಿನ್ ತೆಂಡುಲ್ಕರ್ ವಿಶ್ವಕಪ್ ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದರು. 11 ಪಂದ್ಯಗಳಲ್ಲಿ ಒಟ್ಟು 673 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು. ಮತ್ತೊಮ್ಮೆ ಗರಿಷ್ಠ ಸ್ಕೋರರ್ ಆಗಿದ್ದರು. 673 ಒಂದೇ ಆವೃತ್ತಿಯ ವಿಶ್ವಕಪ್ ನಲ್ಲಿ ಬ್ಯಾಟರ್ ಗಳಿಸಿದ ಗರಿಷ್ಟ ರನ್ ಆಗಿ ಉಳಿದುಕೊಂಡಿದೆ.
2007: ವೀರೇಂದ್ರ ಸೆಹ್ವಾಗ್: 164 ರನ್
2007ರ ವಿಶ್ವಕಪ್ ನಲ್ಲಿ ಭಾರತವು ಗ್ರೂಪ್ ಹಂತದಲ್ಲೇ ನಿರ್ಗಮಿಸಿ ಕಳಪೆ ಪ್ರದರ್ಶನ ನೀಡಿದ್ದರೂ ಕೂಡ ಆ ಆವೃತ್ತಿಯಲ್ಲಿ ವೀರೇಂದ್ರ ಸೆಹ್ವಾಗ್ ಗರಿಷ್ಠ ರನ್ ಗಳಿಸಿದ್ದರು. ಸೆಹ್ವಾಗ್ 3 ಪಂದ್ಯಗಳಲ್ಲಿ ಒಟ್ಟು 164 ರನ್ ಗಳಿಸಿದ್ದರು.
2011: ಸಚಿನ್ ತೆಂಡುಲ್ಕರ್: 482 ರನ್
2011ರ ವಿಶ್ವಕಪ್ ನ ಯಶಸ್ವಿ ಅಭಿಯಾನದಲ್ಲಿ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಭಾರತದ ಪರ ಮತ್ತೊಮ್ಮೆ ಗರಿಷ್ಠ ರನ್ ಕಲೆ ಹಾಕಿದ್ದರು. ತೆಂಡುಲ್ಕರ್ ಕೆಲವು ಶತಕ ಹಾಗೂ ಅರ್ಧಶತಕಗಳ ಸಹಿತ 9 ಪಂದ್ಯಗಳಲ್ಲಿ ಒಟ್ಟು 482 ರನ್ ಗಳಿಸಿದ್ದರು.
2015: ಶಿಖರ್ ಧವನ್: 412 ರನ್
ಭಾರತದ ಎಡಗೈ ಬ್ಯಾಟರ್ ಶಿಖರ್ ಧವನ್ 2015ರ ಆವೃತ್ತಿಯ ವಿಶ್ವಕಪ್ ನಲ್ಲಿ 8 ಪಂದ್ಯಗಳನ್ನು ಆಡಿ ಒಟ್ಟು 412 ರನ್ ಗಳಿಸಿದ್ದರು. ಈ ಮೂಲಕ ಟೂರ್ನಮೆಂಟ್ ನಲ್ಲಿ ಭಾರತದ ಪರ ಟಾಪ್ ಸ್ಕೋರರ್ ಎನಿಸಿಕೊಂಡರು.
2019: ರೋಹಿತ್ ಶರ್ಮಾ 648 ರನ್
2019ರ ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ತನ್ನ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ್ದರು. ಉತ್ತಮ ಬೌಲರ್ ಗಳ ವಿರುದ್ಧ ಸಿಡಿದು ನಿಂತಿದ್ದ ರೋಹಿತ್ 9 ಪಂದ್ಯಗಳಲ್ಲಿ ದಾಖಲೆಯ 5 ಶತಕಗಳ ಸಹಿತ ಒಟ್ಟು 648 ರನ್ ಗಳಿಸಿದ್ದರು. ರೋಹಿತ್ ಒಂದೇ ಆವೃತ್ತಿಯ ವಿಶ್ವಕಪ್ ನಲ್ಲಿ ಗರಿಷ್ಟ ಶತಕ(5)ಸಿಡಿಸಿದ ಬ್ಯಾಟರ್ ಎಂಬ ಸಾಧನೆಯನ್ನು ಮಾಡಿದ್ದಾರೆ.







