ಭಾರತ ಕ್ರಿಕೆಟ್: ತವರು ದಾಖಲೆಯ ಭದ್ರಕೋಟೆ ಛಿದ್ರ; ದಿನೇಶ್ ಕಾರ್ತಿಕ್ ಹೇಳಿದ್ದೇನು?

PC: x.com/circleofcricket
ಮುಂಬೈ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡ, ತವರಿನಲ್ಲೇ ಭಾರತ ತಂಡವನ್ನು 2-0 ಅಂತರದಿಂದ ಮಣಿಸಿ ವೈಟ್ ವಾಶ್ ಮಾಡಿರುವುದು ದೇಶದ ಕ್ರಿಕೆಟ್ ಪ್ರೇಮಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಟೆಂಬಾ ಬವೂಮಾ ನೇತೃತ್ವದ ತಂಡ ಎರಡು ಟೆಸ್ಟ್ ಗಳ ಸರಣಿಯ ಕೊನೆಯ ಪಂದ್ಯವನ್ನು ಗುವಾಹತಿಯಲ್ಲಿ 408 ರನ್ ಗಳ ಭಾರಿ ಅಂತರದಿಂದ ಸೋಲಿಸಿ ಐತಿಹಾಸಿಕ ಸರಣಿ ಜಯ ಸಾಧಿಸಿದೆ.
ಇದು ಟೆಸ್ಟ್ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾಗೆ ಭಾರತದ ವಿರುದ್ಧದ ಅತಿದೊಡ್ಡ ಅಂತರದ ಜಯ. 2000ನೇ ಇಸ್ವಿಯಲ್ಲಿ ಭಾರತದಲ್ಲಿ ಟೆಸ್ಟ್ ಸರಣಿ ಜಯಿಸಿದ ಬಳಿಕ ಮೊದಲ ಬಾರಿಗೆ ಈ ಸಾಧನೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್, "ಭಾರತ ಟೆಸ್ಟ್ ಕ್ರಿಕೆಟ್ ಸಂಕಷ್ಟದಲ್ಲಿದೆ. 0-2 ಅಂತರದ ಹೀನಾಯ ಸೋಲಿನೊಂದಿಗೆ ತವರು ನೆಲದಲ್ಲಿ ಸುಧೀರ್ಘ ಕಾಲದಿಂದ ಭಾರತ ಹೊಂದಿದ್ದ ಯಶಸ್ಸು ದುರ್ಬಲವಾಗಿದೆ" ಎಂದು ಹೇಳಿದ್ದಾರೆ.
"ಭಾರತದ ಪ್ರಭಾವಳಿ ಮಬ್ಬಾಗಿದೆ. ಭಾರತದಲ್ಲಿ ಟೆಸ್ಟ್ ಪಂದ್ಯಕ್ಕೆ ಬರಲು ವಿದೇಶಿ ತಂಡಗಳು ಭಯ ಪಡುತ್ತಿದ್ದವು. ಇದೀಗ ಅವರು ಬಾಯಿ ಚಪ್ಪರಿಸುತ್ತಿದ್ದಾರೆ" ಎಂದು ಇನ್ಸ್ಟಾಗ್ರಾಂ ವಿಡಿಯೊದಲ್ಲಿ ಕಾರ್ತಿಕ್ ಹೇಳಿದ್ದಾರೆ. "ಹನ್ನೆರಡು ತಿಂಗಳ ಅಂತರದಲ್ಲಿ 2ನೇ ವೈಟ್ ವಾಶ್. ಭಾರತದಲ್ಲಿ ಆಡಿದ ಮೂರು ಸರಣಿಗಳ ಪೈಕಿ ಎರಡರಲ್ಲಿ ವೈಟ್ ವಾಶ್. ಟೆಸ್ಟ್ ಕ್ರಿಕೆಟ್ ನಲ್ಲಿ ಇದು ಭಾರತಕ್ಕೆ ಅತ್ಯಂತ ಕಠಿಣ ಕಾಲಘಟ್ಟ. ಕಠಿಣ ನಿರ್ಧಾರಗಳನ್ನು ಕೈಗೊಳ್ಳಲೇಬೇಕು" ಎಂದು ವಿಶ್ಲೇಷಿಸಿದ್ದಾರೆ.





