ಭಾರತ ಕ್ರಿಕೆಟ್ ತಂಡ 12 ವರ್ಷಗಳ ನಂತರ ಮೊದಲ ಬಾರಿ ಟೆಸ್ಟ್ ಸರಣಿ ಸೋಲಲು ಕಳಪೆ ಬ್ಯಾಟಿಂಗ್ ಕಾರಣವೇ ?

ಕೊಹ್ಲಿ, ರೋಹಿತ್ | PTI
ಹೊಸದಿಲ್ಲಿ : ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಕ್ರಿಕೆಟ್ ತಂಡದ ಪ್ರಾಬಲ್ಯವನ್ನು ನ್ಯೂಝಿಲ್ಯಾಂಡ್ ತಂಡ ಹತ್ತಿಕ್ಕಿದೆ. ಇದು ಎಲ್ಲ ಕಡೆಗಳಿಂದ ಟೀಕೆಗಳಿಗೆ ಕಾರಣವಾಗಿದೆ. 2012ರ ನಂತರ ತವರಿನಲ್ಲಿ ಮೊದಲ ಬಾರಿ ಸರಣಿ ಸೋಲಿಗೆ ಆತಿಥೇಯ ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನವೇ ಕಾರಣ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಸ್ವದೇಶ ಇಲ್ಲವೇ ವಿದೇಶಿ ಸರಣಿ ಇರಲಿ, ಭಾರತದ ಬ್ಯಾಟರ್ಗಳು ಪರದಾಟ ನಡೆಸುತ್ತಿರುವುದು ಇದೇ ಮೊದಲಲ್ಲ. ಆದರೆ ಸ್ವದೇಶದಲ್ಲಿ ಭಾರತದ ಸತತ 18 ಟೆಸ್ಟ್ ಸರಣಿಯ ಅಜೇಯ ಓಟಕ್ಕೆ ತಡೆ ಬಿದ್ದಿರುವುದು ಹೆಚ್ಚು ಚರ್ಚೆಗೆ ಕಾರಣವಾಗಿದೆ.
ಸ್ಪಿನ್ ಬೌಲಿಂಗ್ ಎದುರು ಚೆನ್ನಾಗಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಭಾರತದ ಬ್ಯಾಟರ್ ಗಳು ಕಿವೀಸ್ ನ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ವಿರುದ್ಧ ಪರದಾಟ ನಡೆಸಿರುವುದು ಎಲ್ಲರಿಗೂ ಅಚ್ಚರಿ ತಂದಿದೆ. ಸ್ಯಾಂಟ್ನರ್ ಪುಣೆ ಟೆಸ್ಟ್ ಪಂದ್ಯದಲ್ಲಿ ಒಟ್ಟು 13 ವಿಕೆಟ್ಗಳನ್ನು ಉರುಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಅಗ್ರ ಕ್ರಮಾಂಕವು ವಿಶ್ವದ ಕೆಲವು ಶ್ರೇಷ್ಠ ಬ್ಯಾಟರ್ ಗಳನ್ನು ಹೊಂದಿದ್ದು, ನಿರ್ದಿಷ್ಟ ದಿನದಂದು ವಿಶ್ವದ ಯಾವುದೇ ಬೌಲಿಂಗ್ ದಾಳಿಗೆ ದುಸ್ವಪ್ನವಾಗಬಹುದು. ಆದರೆ ಒಮ್ಮೆ ತಂಡದ ಪ್ರಮುಖ ಶಕ್ತಿಯಾಗಿದ್ದ ಪ್ರಾಬಲ್ಯವು ಪ್ರತಿ ಸರಣಿಯಲ್ಲೂ ಕ್ಷೀಣಿಸುತ್ತಿದೆ.
ಕೆಳ ಮಧ್ಯಮ ಸರದಿಯ ಸಾಮರ್ಥ್ಯದಿಂದ ಭಾರತವು ತನ್ನ ಪರವಾದ ಫಲಿತಾಂಶಗಳನ್ನು ದಾಖಲಿಸಿದೆ. ಮಧ್ಯಮ ಸರದಿಯು ಅಗತ್ಯವಿದ್ದಾಗಲೆಲ್ಲಾ ತಂಡವನ್ನು ಸಮಸ್ಯೆಯಿಂದ ಪಾರು ಮಾಡಿದೆ.
► ಆತಂಕ ಮೂಡಿಸಿದ ರೋಹಿತ್, ಕೊಹ್ಲಿ ಅವರ ಕಳಪೆ ಫಾರ್ಮ್:
2022ರ ನಂತರ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಕಳಪೆ ಫಾರ್ಮ್ ನಲ್ಲಿದ್ದಾರೆ. ರೋಹಿತ್ 20 ಪಂದ್ಯಗಳಲ್ಲಿ(35 ಇನಿಂಗ್ಸ್)1,194 ರನ್ ಗಳಿಸಿದರೆ, ಕೊಹ್ಲಿ 19 ಪಂದ್ಯಗಳಲ್ಲಿ(33 ಇನಿಂಗ್ಸ್)1,181 ರನ್ ಗಳಿಸಲು ಶಕ್ತರಾಗಿದ್ದಾರೆ. ಈ ಇಬ್ಬರು ಆಟಗಾರರು ಈ ಹಿಂದೆ ಸ್ಥಿರ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಇದೀಗ ಇಬ್ಬರ ಬ್ಯಾಟಿಂಗ್ ಪ್ರದರ್ಶನವು ನಿರೀಕ್ಷಿತ ಮಟ್ಟದಲ್ಲಿಲ್ಲ. ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ಪರದಾಡುತ್ತಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಕೊಹ್ಲಿ ಅವರ ಫಾರ್ಮ್ ಕುರಿತು ಅತಂಕ ವ್ಯಕ್ತಪಡಿಸಿದ್ದಾರೆ. ಹಿಂದಿನ 5 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ ಕೇವಲ ಎರಡು ಶತಕಗಳನ್ನು ಗಳಿಸಿದ್ದಾರೆ ಎಂದು ಅವರು ಬೆಟ್ಟು ಮಾಡಿದ್ದಾರೆ.
ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿರುವ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಅಗ್ರ ಸರದಿಯಲ್ಲಿ ಆಶಾಕಿರಣವಾಗಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ 1,000 ಟೆಸ್ಟ್ ರನ್ ಪೂರೈಸಿದ ಭಾರತದ ಯುವ ಆಟಗಾರ ಎನಿಸಿಕೊಂಡಿದ್ದು, ಪುಣೆಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದ ವೇಳೆ ಈ ಸಾಧನೆ ಮಾಡಿದ್ದಾರೆ.
► ಸದಾ ಕಾಲ ರಕ್ಷಣೆಗೆ ಧಾವಿಸುವ ಕೆಳ ಮಧ್ಯಮ ಸರದಿ
ಭಾರತದ ಕೆಳ ಮಧ್ಯಮ ಸರದಿಯು ಭಾರತವು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ರಕ್ಷಣೆಗೆ ಧಾವಿಸುತ್ತವೆ. ರವೀಂದ್ರ ಜಡೇಜ, ಆರ್.ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಸಾಕಷ್ಟು ರನ್ ಗಳಿಸಿದ್ದಾರೆ. ಸವಾಲಿನ ಪರಿಸ್ಥಿತಿಗಳಲ್ಲಿ ತಂಡವನ್ನು ರಕ್ಷಿಸುವ ಸಾಮರ್ಥ್ಯ ಹಾಗೂ ಸೋಲಿನ ದವಡೆಯಿಂದ ಗೆಲುವನ್ನು ಕಸಿದುಕೊಂಡಿರುವುದು ಭಾರತದ ಗೆಲುವಿನ ಓಟವನ್ನು ಕಾಯ್ದುಕೊಳ್ಳಲು ಪ್ರಮುಖ ಕಾಣಿಕೆ ನೀಡಿದೆ.
ಅಶ್ವಿನ್ ಹಾಗೂ ಜಡೇಜ ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತವು 144 ರನ್ಗೆ 6 ವಿಕೆಟ್ಗಳನ್ನು ಕಳೆದುಕೊಂಡಿದ್ದಾಗ ನಿರ್ಣಾಯಕ 199 ರನ್ ಜೊತೆಯಾಟ ನಡೆಸಿದ್ದರು. ಹೊಸದಿಲ್ಲಿಯಲ್ಲಿ ಆಸ್ಟ್ರೇಲಿಯದ ವಿರುದ್ಧ ಅಕ್ಷರ್ ಪಟೇಲ್ರೊಂದಿಗೆ 114 ರನ್ ಭಾಗೀದಾರಿಕೆಯಲ್ಲಿ ಭಾಗಿಯಾದ ಅಶ್ವಿನ್ 139 ರನ್ಗೆ 7 ವಿಕೆಟ್ಗಳನ್ನು ಕಳೆದುಕೊಂಡಿದ್ದ ತಂಡಕ್ಕೆ ಆಸರೆಯಾಗಿದ್ದರು. ಭಾರತ ತಂಡವು ಚಿತ್ತಗಾಂಗ್ ನಲ್ಲಿ ಬಾಂಗ್ಲಾದೇಶ ವಿರುದ್ಧ 293 ರನ್ಗೆ 7 ವಿಕೆಟ್ ಕಳೆದುಕೊಂಡಿದ್ದಾಗ ಅಶ್ವಿನ್ ಹಾಗೂ ಕುಲದೀಪ್ ಯಾದವ್ 92 ರನ್ ಸೇರಿಸಿದ್ದರು. ಆಸ್ಟ್ರೇಲಿಯ ವಿರುದ್ಧ ನಾಗ್ಪುರದಲ್ಲಿ ಭಾರತ ತಂಡ 240 ರನ್ಗೆ 7 ವಿಕೆಟ್ಗಳನ್ನು ಕಳೆದುಕೊಂಡಿದ್ದಾಗ ಜಡೇಜ ಹಾಗೂ ಅಕ್ಷರ್ ಪಟೇಲ್ 88 ರನ್ ಜೊತೆಯಾಟ ನಡೆಸಿದ್ದರು.
ರಾಂಚಿಯಲ್ಲಿ ಇಂಗ್ಲೆಂಡ್ ವಿರುದ್ಧ 76 ರನ್ ಜೊತೆಯಾಟ ನಡೆಸಿದ್ದ ಧ್ರುವ್ ಜುರೆಲ್ ಹಾಗೂ ಕುಲದೀಪ್ 177 ರನ್ಗೆ 7 ವಿಕೆಟ್ಗಳನ್ನು ಕಳೆದುಕೊಂಡಿದ್ದ ತಂಡವನ್ನು ಆಧರಿಸಿದ್ದರು. ಮೀರ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ 145 ರನ್ ಚೇಸ್ ವೇಳೆ ಭಾರತವು 74 ರನ್ಗೆ 7 ವಿಕೆಟ್ ಗಳನ್ನು ಕಳೆದುಕೊಂಡಿದ್ದಾಗ ಅಶ್ವಿನ್ ಹಾಗೂ ಶ್ರೇಯಸ್ ಅಯ್ಯರ್ ಅಜೇಯ 71 ರನ್ ಜೊತೆಯಾಟ ನಡೆಸಿದ್ದರು. ಕೆಳ ಮಧ್ಯಮ ಸರದಿಯ ನಿರ್ಣಾಯಕ ಕೊಡುಗೆಗಳು ಪಂದ್ಯವು ಭಾರತದ ಪರ ವಾಲಲು ಕಾರಣವಾಗಿದೆ.
► ಕಿವೀಸ್ ವಿರುದ್ಧ ಭಾರತ ತಂಡ ಮಾಡಿರುವ ತಪ್ಪೇನು?
ಕಳೆದ ಕೆಲವು ಸಮಯದಿಂದ ಕೆಳ ಮಧ್ಯಮ ಸರದಿಯು ಭಾರತಕ್ಕೆ ಆಸರೆಯಾಗುತ್ತಾ ಬಂದಿದೆ. ನ್ಯೂಝಿಲ್ಯಾಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿನ ಅಪರೂಪದ ವೈಫಲ್ಯದಿಂದಾಗಿ ಭಾರತ ತಂಡವು ಎರಡು ವರ್ಷಗಳಿಗೂ ಅಧಿಕ ಸಮಯದ ನಂತರ ಮೊದಲ ಬಾರಿ ಸರಣಿಯಲ್ಲಿ ಸೋತಿದೆ.
2021-22ರ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ಭಾರತ ತಂಡವು 8 ಟೆಸ್ಟ್ ಸರಣಿಗಳನ್ನು ಆಡಿದೆ. ಈ ಪೈಕಿ 6ರಲ್ಲಿ ಗೆಲುವು ಹಾಗೂ ಎರಡರಲ್ಲಿ ಡ್ರಾ ಸಾಧಿಸಿದೆ.
ಅಶ್ವಿನ್ ಹಾಗೂ ಜಡೇಜ ಬೌಲಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದ ಕಾರಣ ಭಾರತ ತಂಡವು ಸ್ವದೇಶದಲ್ಲಿ 12 ವರ್ಷಗಳಿಂದ ಟೆಸ್ಟ್ ಸರಣಿಯಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದೆ. 2011ರಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಅಶ್ವಿನ್ ಹಾಗೂ 2012ರಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದ ಜಡೇಜ ಅವರು ಬಲಿಷ್ಠ ಸ್ಪಿನ್ ಜೋಡಿಯಾಗಿ ಗಮನ ಸೆಳೆದಿದ್ದಾರೆ.
ಸ್ವದೇಶಿ ಟೆಸ್ಟ್ ಪಂದ್ಯದಲ್ಲಿ ಈ ಇಬ್ಬರು ಒಟ್ಟಿಗೆ ಆಡಿದ ಸಂದರ್ಭದಲ್ಲಿ ಅಶ್ವಿನ್ 55 ಪಂದ್ಯಗಳಲ್ಲಿ 326 ವಿಕೆಟ್ ಗಳನ್ನು ಕಬಳಿಸಿದರೆ, ಜಡೇಜ 47 ಪಂದ್ಯಗಳಲ್ಲಿ 225 ವಿಕೆಟ್ಗಳನ್ನು ಉರುಳಿಸಿದ್ದರು.
ಬೆಂಗಳೂರು ಹಾಗೂ ಪುಣೆಯಲ್ಲಿ ನಡೆದ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಈ ಇಬ್ಬರು ವಿಕೆಟ್ ಪಡೆಯುವಲ್ಲಿ ವಿಫಲರಾದರು. ಪರಿಣಾಮವಾಗಿ ಭಾರತವು 12 ವರ್ಷಗಳ ನಂತರ ಮೊದಲ ಬಾರಿ ಸ್ವದೇಶದಲ್ಲಿ ಟೆಸ್ಟ್ ಸರಣಿ ಸೋಲುವಂತಾಯಿತು.







