ಏಶ್ಯಕಪ್ಗೆ ಆಗಸ್ಟ್ 19ರಂದು ಭಾರತ ಕ್ರಿಕೆಟ್ ತಂಡ ಪ್ರಕಟ

PC : PTI
ಮುಂಬೈ, ಆ.15: ಯುಎಇನಲ್ಲಿ ಸೆಪ್ಟಂಬರ್ 19ರಿಂದ ಆರಂಭವಾಗಲಿರುವ ಏಶ್ಯಕಪ್ಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಮುಂಬಯಿನಲ್ಲಿ ಆಗಸ್ಟ್ 19ರಂದು ಆಯ್ಕೆ ಮಾಡಲಾಗುವುದು ಎಂದು ವರದಿಯಾಗಿದೆ.
‘ಏಶ್ಯಕಪ್ಗಾಗಿ ಭಾರತ ಕ್ರಿಕೆಟ್ ತಂಡವನ್ನು ಆಗಸ್ಟ್ 19ರಂದು ಮುಂಬೈನಲ್ಲಿ ಆಯ್ಕೆ ಮಾಡಲಾಗುವುದು. ಆಯ್ಕೆ ಸಮಿತಿಯ ಸಭೆಯ ನಂತರ ಮುಖ್ಯ ಆಯ್ಕೆಗಾರ, ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಆಯ್ಕೆ ಸಮಿತಿಯ ಸಭೆಯಲ್ಲಿ ಭಾರತದ ಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಭಾಗವಹಿಸಲಿದ್ದಾರೆ. ಸ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಯ ನಂತರ ಸದ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿರುವ ಯಾದವ್ ಬೆಂಗಳೂರಿನಿಂದ ಮುಂಬೈಗೆ ತೆರಳಲಿದ್ದಾರೆ.
ಸೆಪ್ಟಂಬರ್ 9ರಂದು ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ಹಾಗೂ ಹಾಂಕಾಂಗ್ ನಡುವಿನ ಪಂದ್ಯದ ಮೂಲಕ ಏಶ್ಯಕಪ್ ಆರಂಭವಾಗಲಿದೆ. ಭಾರತ ತಂಡವು ಸೆ.10ರಂದು ದುಬೈನಲ್ಲಿ ಯುಎಇ ತಂಡದ ವಿರುದ್ಧ್ದ ಆಡಲಿದೆ.





