ಭಾರತೀಯ ಹಾಕಿ ತಂಡದ ಮಾಜಿ ಕೋಚ್ ಮೈಕೆಲ್ ನೋಬ್ಸ್ ನಿಧನ

ಮೈಕೆಲ್ ನೋಬ್ಸ್ | Photo Credit : NDTV
ಹೊಸದಿಲ್ಲಿ, ಜ. 29: ಭಾರತೀಯ ಪುರುಷರ ಹಾಕಿ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯದ ಮಾಜಿ ಹಾಕಿ ಆಟಗಾರ ಮೈಕೆಲ್ ನೋಬ್ಸ್ ಸುದೀರ್ಘ ಕಾಲದ ಕಾಯಿಲೆಯ ಬಳಿಕ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ನೋಬ್ಸ್ ಅವರು ಪತ್ನಿ, ಆಸ್ಟ್ರೇಲಿಯದ ಮಹಿಳಾ ಹಾಕಿ ತಂಡದ ಮಾಜಿ ಆಟಗಾರ್ತಿ ಲೀ ಕೇಪ್ಸ್ ಮತ್ತು ಪುತ್ರಿ, ಆಸ್ಟ್ರೇಲಿಯದ ಹಾಲಿ ಹಾಕಿ ಆಟಗಾರ್ತಿ ಕೇಟ್ಲಿನ್ರನ್ನು ಅಗಲಿದ್ದಾರೆ.
ನೋಬ್ಸ್ ಅವರು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಭಾರತೀಯ ಪುರುಷರ ಹಾಕಿ ತಂಡಕ್ಕೆ ತರಬೇತಿ ನೀಡಿದ್ದರು.
ನೋಬ್ಸ್ ಆಸ್ಟ್ರೇಲಿಯ ತಂಡದಲ್ಲಿ ರಕ್ಷಣಾ ಆಟಗಾರನಾಗಿ ಆಡಿದ್ದಾರೆ. ಅವರು ತನ್ನ ವಿಶ್ವಾಸಾರ್ಹತೆ, ದೈಹಿಕ ಕ್ಷಮತೆ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದ್ದಾರೆ. ಅವರು 1979 ಮತ್ತು 1985ರ ನಡುವೆ ಆಸ್ಟ್ರೇಲಿಯದ ಪರವಾಗಿ 76 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಅವರು ಒಂದು ಗೋಲು ದಾಖಲಿಸಿದ್ದಾರೆ.
1981ರಲ್ಲಿ ಮುಂಬೈಯಲ್ಲಿ ನಡೆದ ಹಾಕಿ ವಿಶ್ವಕಪ್ ಮತ್ತು 1984ರಲ್ಲಿ ನಡೆದ ಲಾಸ್ಏಂಜಲಿಸ್ ಒಲಿಂಪಿಕ್ಸ್ನಲ್ಲಿ ಅವರು ಆಸ್ಟ್ರೇಲಿಯ ತಂಡದ ಅವಿಭಾಜ್ಯ ಅಂಗವಾಗಿದ್ದರು.
ಭಾರತೀಯ ಹಾಕಿ ತಂಡವು 2008ರ ಬೀಜಿಂಗ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ವಿಫಲವಾದ ಬಳಿಕ, ನೋಬ್ಸ್ 2011ರಲ್ಲಿ ತಂಡದ ಕೋಚ್ ಆಗಿ ನೇಮಕಗೊಂಡರು. ಆದರೆ 2012ರ ಒಲಿಂಪಿಕ್ಸ್ನಲ್ಲಿ ತಂಡವು ಕೊನೆಯ ಸ್ಥಾನ ಗಳಿಸಿತು.





