Asian Games | ಭಾರತದ ಕಬಡ್ಡಿ ತಂಡಗಳು ಫೈನಲ್ ಗೆ

Photo Credit : X
ನಗೋಯ, ಸೆ.25: ಭಾರತೀಯ ಕಬಡ್ಡಿ ತಂಡಗಳು ಏಶ್ಯನ್ ಗೇಮ್ಸ್ನಲ್ಲಿ ಸತತ ಎರಡನೇ ಚಿನ್ನದ ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಪುರುಷರ ಹಾಗೂ ಮಹಿಳೆಯರ ತಂಡಗಳು ಫೈನಲ್ಗೆ ಪ್ರವೇಶಿಸಿವೆ.
ಭಾರತೀಯ ಪುರುಷರ ಕಬಡ್ಡಿ ತಂಡವು ಥಾಯ್ಲೆಂಡ್ ತಂಡವನ್ನು 66-28 ಅಂತರದಿಂದ ಮಣಿಸಿದರೆ, ಮಹಿಳೆಯರ ತಂಡವು ನೇಪಾಳ ತಂಡವನ್ನು 48-24 ಅಂತರದಿಂದ ಸೋಲಿಸಿದೆ.
ಭಾರತದ ಎರಡೂ ತಂಡಗಳು ಶನಿವಾರ ನಡೆಯಲಿರುವ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಇರಾನ್ ತಂಡದ ಸವಾಲನ್ನು ಎದುರಿಸಲಿವೆ. ಎರಡೂ ಸ್ಪರ್ಧೆಗಳಲ್ಲಿನ ಸೆಮಿಫೈನಲ್ನಲ್ಲಿ ಇರಾನ್ ತಂಡವು ಚೈನೀಸ್ ತೈಪೆಯನ್ನು (ಮಹಿಳೆಯರು 23-19, ಪುರುಷರು 59-21) ಮಣಿಸಿದೆ.
ಐಚಿಯ ಟೊಕೈ ಸಿಟಿಝನ್ ಜಿಮ್ನಾಸಿಯಮ್ನಲ್ಲಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಹಾಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಭಾರತದ ಪುರುಷರ ತಂಡವು ತನ್ನೆಲ್ಲಾ ಪಂದ್ಯಗಳನ್ನು ಜಯಿಸಿ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ.
ಜೈದೀಪ್ ದಹಿಯಾ, ಸುಮಿತ್, ರಾಹುಲ್ ಸೆಥ್ಪಾಲ್ ಹಾಗೂ ನಾಯಕ ಸುನೀಲ್ ಕುಮಾರ್ ಭಾರತದ ಡಿಫೆನ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಏಶ್ಯನ್ ಗೇಮ್ಸ್ನಲ್ಲಿ ಎಂಟು ಬಾರಿ ಚಾಂಪಿಯನ್ ಆಗಿರುವ ಭಾರತವು ಮೊದಲ ಐದು ನಿಮಿಷಗಳಲ್ಲಿ ಎದುರಾಳಿ ತಂಡವನ್ನು ಆಲೌಟ್ ಮಾಡಿದೆ.
ಇದೇ ಮೊದಲ ಬಾರಿ ಸೆಮಿಫೈನಲ್ನಲ್ಲಿ ಆಡಿದ ಥಾಯ್ಲೆಂಡ್ ಆರಂಭಿಕ ಆಘಾತದಿಂದ ನಿಧಾನವಾಗಿ ಚೇತರಿಸಿಕೊಂಡಿದೆ.
ಭಾರತವು 10 ಆವೃತ್ತಿಗಳಲ್ಲಿ 9ನೇ ಬಾರಿ ಪುರುಷರ ಕಬಡ್ಡಿಯಲ್ಲಿ ಫೈನಲ್ಗೆ ತಲುಪಿದೆ. 2018ರ ಜಕಾರ್ತದಲ್ಲಿ ಫೈನಲ್ ತಲುಪುವಲ್ಲಿ ವಿಫಲವಾಗಿದ್ದು, ಕಂಚಿಗೆ ತೃಪ್ತಿಪಟ್ಟುಕೊಂಡಿತ್ತು.






