ಜಪಾನ್ನಲ್ಲಿ ವಸತಿ ಸಮಸ್ಯೆ ಎದುರಿಸಿದ ಭಾರತದ ರೋಯಿಂಗ್, ಶೂಟಿಂಗ್ ತಂಡಗಳು

Photo Credit: X/ Screengrab
ಟೋಕಿಯೊ: ಜಪಾನಿನ ಸಂಘಟನಾ ದಕ್ಷತೆಯ ಖ್ಯಾತಿಗೆ ಭಾರೀ ಧಕ್ಕೆ ಉಂಟಾಗಿದ್ದು, ಜಪಾನಿಗೆ ಬಂದಿಳಿದ ಭಾರತದ ರೋಯಿಂಗ್ ಹಾಗೂ ಶೂಟಿಂಗ್ ತಂಡಗಳು ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಬೇಕಾಯಿತು. ರೋಯಿಂಗ್ ತಂಡದ ಬಹುಪಾಲು ಸದಸ್ಯರಿಗೆ ವಸತಿ ವ್ಯವಸ್ಥೆ ಸಿಗದೆ ಪರದಾಡುವಂತಾಯಿತು. ಕೆಲವರ ಹೆಸರುಗಳು ಅಧಿಕೃತ ನೋಂದಣಿ ವ್ಯವಸ್ಥೆಯಲ್ಲಿಯೇ ಕಾಣೆಯಾಗಿದ್ದವು.
‘ಪುರುಷರ ವಿಭಾಗದ 22 ಕ್ರೀಡಾಪಟುಗಳ ಪೈಕಿ ಕೇವಲ ಮೂವರಿಗೆ ಮಾತ್ರ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳಾ ರೋಯಿಂಗ್ ತಂಡದ ಐವರು ಪೈಕಿ ಮೂವರ(ಪೂನಮ್, ಅಲೀನಾ ಆಂಟೋ ಹಾಗೂ ಆಂಶಿಕಾ ಭಾರತಿ)ಹೆಸರುಗಳು ಆಯೋಜಕರ ಬಳಿ ನೋಂದಣಿಯಾಗಿಲ್ಲ. ಈ ಮೂವರ ಬಳಿ ಮಾನ್ಯತೆ ಕಾರ್ಡ್ ಕೂಡ ಇತ್ತು’ಎಂದು ಭಾರತದ ರೋಯಿಂಗ್ ಒಕ್ಕೂಟದ ಅಧಿಕಾರಿಯೊಬ್ಬರು ತಿಳಿಸಿದರು.
ಏತನ್ಮಧ್ಯೆ ಮಂಗಳವಾರ ರಾತ್ರಿ 9 ಗಂಟೆಗೆ ನಗೋಯಾ ವಿಮಾನ ನಿಲ್ದಾಣವನ್ನು ತಲುಪಿದ್ದ ಶೂಟರ್ಗಳು ತಮ್ಮ ವಾಹನಕ್ಕಾಗಿ ಸುಮಾರು ಮೂರು ಗಂಟೆಗಳ ಕಾಲ ಕಾಯಬೇಕಾಯಿತು.
‘‘ನಮಗೆ ಬಸ್ ಸಿಗಲಿಲ್ಲ, ಅಲ್ಲಿ ಯಾವುದೇ ಆಹಾರವೂ ಇರಲಿಲ್ಲ. ವಿಮಾನ ನಿಲ್ದಾಣದಲ್ಲಿ ಎಲ್ಲವೂ ಮುಚ್ಚಿದ್ದವು. ಸ್ವಾಗತ ಕೇಂದ್ರದಲ್ಲಿ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ಹೀಗಾಗಿ ನಾವು ಕಾಯಬೇಕಾಯಿತು. ಅಂತಿಮವಾಗಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹೋಟೆಲ್ ತಲುಪಿದೆವು’’ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ತಪ್ಪು ಮಾನ್ಯತೆ ಪತ್ರ ಪಡೆದ ಸಮರೇಶ್ ಜಂಗ್: ಭಾರತದ ಪಿಸ್ತೂಲ್ ಶೂಟಿಂಗ್ ತಂಡದ ಮುಖ್ಯ ತರಬೇತುದಾರ ಸಮರೇಶ್ ಜಂಗ್ ಅವರಿಗೆ ಅನಿರೀಕ್ಷಿತ ಆಘಾತವೊಂದು ಎದುರಾಯಿತು. ತಪ್ಪು ಮಾನ್ಯತಾ ಪತ್ರದಿಂದಾಗಿ ಪಂದ್ಯಗಳ ಸಮಯದಲ್ಲಿ ಆಟಗಾರರ ವಲಯ ಹಾಗೂ ಆಟ ನಡೆಯುವ ಸ್ಥಳಕ್ಕೆ ಪ್ರವೇಶಿಸಲು ಅವಕಾಶ ಸಿಗದೆ ಆಘಾತಕ್ಕೊಳಗಾದರು.
‘ಸಮರೇಶ್ ಅವರ ಮಾನ್ಯತಾ ಪತ್ರವನ್ನು ನೋಡಿದಾಗ ನಮಗೆ ಆಶ್ಚರ್ಯ ಹಾಗೂ ಆಘಾತವಾಯಿತು. ಈ ಬಗ್ಗೆ ವಿಚಾರಿಸಿದಾಗ ಆಯೋಜಕರಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯು ನೀಡಿದ್ದ ಪಟ್ಟಿಯ ಪ್ರಕಾರವೇ ಇದನ್ನು ಮಾಡಲಾಗಿದೆ ಎಂದು ನಮಗೆ ತಿಳಿಸಲಾಯಿತು’’ಎಂದು ಮೂಲವೊಂದು ತಿಳಿಸಿದೆ.
‘‘ನಾವು ನ್ಯಾಶನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾದಲ್ಲಿರುವ ನಮ್ಮ ಕಚೇರಿಯನ್ನು ಸಂಪರ್ಕಿಸಿದೆವು. ಈ ವಿಷಯವನ್ನು ಅವರಿಗೆ ತಿಳಿಸಲಾಯಿತು. ಸಮರೇಶ್ ಅವರಿಗೆ ನಾಳೆ ಹೊಸ ಮಾನ್ಯತಾ ಪತ್ರ(ಅಕ್ರೆಡಿಟೇಶನ್)ಸಿಗಲಿದೆ ಎಂದು ನಮಗೆ ತಿಳಿಸಲಾಗಿದೆ’’ ಎಂದು ಮೂಲಗಳು ತಿಳಿಸಿವೆ.
ಸುರುಚಿ ಫೋಗಟ್ ಹಾಗೂ ಆಕಾಶ ಭಾರದ್ವಾಜ್ ಅವರಂತಹ 10 ಮೀಟರ್ ಏರ್ ಪಿಸ್ತೂಲ್ ಶೂಟರ್ಗಳು ಸಮರೇಶ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವುದರಿಂದ ಅವರ ಅನುಪಸ್ಥಿತಿಯು ಭಾರತದ ಪದಕ ಗೆಲ್ಲುವ ಸಾಧ್ಯತೆಗಳ ಮೇಲೆ ಪರಿಣಾಮ ಬೀರಲಿದೆ.






