ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಟಿ-10 ಕ್ರಿಕೆಟ್ ಟೂರ್ನಿ ; ಮುಂಬೈ ತಂಡದ ಮಾಲಿಕರಾದ ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್ | Photo: PTI
ಮುಂಬೈ: ಬಾಲಿವುಡ್ನ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ನ(ಐಎಸ್ಪಿಎಲ್)ಮುಂಬೈ ತಂಡದ ಮಾಲಿಕರಾಗಿದ್ದಾರೆ. ಈ ಕುರಿತು ಅವರು ತಮ್ಮ ವೈಯಕ್ತಿಕ ಬ್ಲಾಗ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮುಂಬೈ ತಂಡದೊಂದಿಗಿನ ತಮ್ಮ ನಂಟನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಭಾರತದ ಮೊದಲ ಟೆನಿಸ್ ಬಾಲ್ ಟಿ-10 ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಸ್ಟೇಡಿಯಂನೊಳಗೆ ಆಡಲಾಗುತ್ತದೆ. ಉದ್ಘಾಟನಾ ಆವೃತ್ತಿಯು ಮಾರ್ಚ್ 2ರಿಂದ 9ರ ತನಕ ಮುಂಬೈನಲ್ಲಿ ನಡೆಯಲಿದೆ ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.
ಪಂದ್ಯಾವಳಿಯಲ್ಲಿ 19 ಪಂದ್ಯಗಳಿರಲಿದ್ದು, ಹೈದರಾಬಾದ್, ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತಾ ಹಾಗೂ ಶ್ರೀನಗರ ಸೇರಿ ಆರು ತಂಡಗಳು ಭಾಗವಹಿಸಲಿವೆ.
ಈ ವಿಶಿಷ್ಟ ಪಂದ್ಯಾವಳಿಯು ಬೀದಿಗಳಲ್ಲಿ ಹಾಗೂ ತಾತ್ಕಾಲಿಕ ಪಿಚ್ಗಳಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುತ್ತಿರುವ ಆಟಗಾರರಿಗೆ ವೇದಿಕೆಯನ್ನು ಕಲ್ಪಿಸಲು ಪ್ರಯತ್ನಿಸಲಿದೆ. ಐಎಸ್ಪಿಎಲ್ ಈ ಪ್ರತಿಭೆಗಳನ್ನು ಬೆಳಕಿಗೆ ತರುವ ಗುರಿ ಇಟ್ಟುಕೊಂಡಿದೆ. ಇದು ಜಾಗತಿಕ ಪ್ರೇಕ್ಷಕರ ಮುಂದೆ ಅವರ ಕ್ರಿಕೆಟ್ ಪರಾಕ್ರಮವನ್ನು ಪ್ರದರ್ಶಿಸಲು ಅನುವು ಮಾಡಿಕೊಡಲಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಪಂದ್ಯಾವಳಿಯ ಭಾಗವಾಗಿರುವುದು ನನಗಿದು ಹೊಸ ಆರಂಭ ಎಂದು ಬಚ್ಚನ್ ಹೇಳಿದ್ದಾರೆ. ಹೊಸ ದಿನ.. ಹೊಸ ಉದ್ಯಮ.. ಇದೊಂದು ದೊಡ್ಡ ಗೌರವ. ಮುಂಬೈ ತಂಡದ ಮಾಲಿಕರಾಗಿರುವುದು ಅದೃಷ್ಟ ಎಂದು 81 ವರ್ಷದ ನಟ ತಮ್ಮ ವೈಯಕ್ತಿಕ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ಗಲ್ಲಿಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ ಪ್ರತಿಭೆಗಳಿಗೆ ವೇದಿಕೆ ಲಭಿಸಿದಂತಾಗಿದೆ. ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಒಂದು ಉದಾತ್ತ ಪರಿಕಲ್ಪನೆ ಎಂದು ಬಚ್ಚನ್ ಬಣ್ಣಿಸಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಹಾಗೂ ಹೃತಿಕ್ ರೋಶನ್ ಕೂಡ ಕ್ರಮವಾಗಿ ಶ್ರೀನಗರ ಹಾಗೂ ಬೆಂಗಳೂರು ತಂಡವನ್ನು ಮಾಲಿಕರಾಗಿ ಪ್ರತಿನಿಧಿಸುವುದಾಗಿ ಬಹಿರಂಗಪಡಿಸಿದ್ದರು. ಈ ಮೂಲಕ ಲೀಗ್ ಮಾಲಿಕತ್ವಕ್ಕೆ ತಾರಾ ಮೆರುಗನ್ನು ನೀಡಿದ್ದರು.







