93 ವರ್ಷಗಳಲ್ಲೇ ಮೊದಲು | ಐವರು ಎಡಗೈ ಬ್ಯಾಟರ್ ಗಳನ್ನು ಕಣಕ್ಕಿಳಿಸಿದ ಭಾರತ ತಂಡ!

ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ | PC : PTI
ಮ್ಯಾಂಚೆಸ್ಟರ್, ಜು.23: ಇಂಗ್ಲೆಂಡ್ ತಂಡದ ವಿರುದ್ಧ ಬುಧವಾರ ಆರಂಭವಾದ 4ನೇ ಟೆಸ್ಟ್ ಪಂದ್ಯದ ಆಡುವ 11ರ ಬಳಗದಲ್ಲಿ ಐವರು ಎಡಗೈ ಬ್ಯಾಟರ್ ಗಳನ್ನು ಕಣಕ್ಕಿಳಿಸಿರುವ ಟೀಮ್ ಇಂಡಿಯಾವು ಟೆಸ್ಟ್ ಕ್ರಿಕೆಟ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಭಾರತದ 592 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, 93 ವರ್ಷಗಳಲ್ಲಿ ಮೊದಲ ಬಾರಿ ಐವರು ಎಡಗೈ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ರಿಷಭ್ ಪಂತ್, ರವೀಂದ್ರ ಜಡೇಜ ಹಾಗೂ ವಾಶಿಂಗ್ಟನ್ ಸುಂದರ್ ಒಂದೇ ಪಂದ್ಯದಲ್ಲಿ ಆಡುತ್ತಿದ್ದಾರೆ.
ಭಾರತೀಯ ತಂಡವು ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ಟೆಸ್ಟ್ ಸರಣಿಯ ನಿರ್ಣಾಯಕ 4ನೇ ಪಂದ್ಯದಲ್ಲಿ 3 ಬದಲಾವಣೆಗಳನ್ನು ಮಾಡಿದೆ. 3ನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಬದಲಿಗೆ ಸಾಯಿ ಸುದರ್ಶನ್ ಆಡಿದರು. ಆಲ್ರೌಂಡರ್ ಶಾರ್ದುಲ್ ಠಾಕೂರ್ ಅವರು ನಿತೀಶ್ ರೆಡ್ಡಿ ಬದಲಿಗೆ ಆಡಿದರು.
24ರ ಹರೆಯದ ಅಂಶುಲ್ ಅವರು ಆಕಾಶ್ ದೀಪ್ ಬದಲಿಗೆ ಚೊಚ್ಚಲ ಅಂತರ್ರಾಷ್ಟ್ರೀಯ ಪಂದ್ಯ ಆಡಿದರು.
ಲಾರ್ಡ್ಸ್ ಟೆಸ್ಟ್ ನ ಮೊದಲ ದಿನದಾಟದಲ್ಲಿ ಬೆರಳಿನ ಗಾಯಕ್ಕೆ ಒಳಗಾಗಿದ್ದ ರಿಷಭ್ ಪಂತ್ ಅವರು ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸುವ ಕುರಿತು ಗೊಂದಲವಿತ್ತು. ಆದರೆ ಸರಿಯಾದ ಸಮಯಕ್ಕೆ ಚೇತರಿಸಿಕೊಂಡಿರುವ ಪಂತ್ ತಂಡದಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ.
*ಭಾರತದ ಆಡುವ 11ರ ಬಳಗದಲ್ಲಿರುವ ಎಡಗೈ ಬ್ಯಾಟರ್ಗಳು
ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ರಿಷಭ್ ಪಂತ್, ರವೀಂದ್ರ ಜಡೇಜ, ವಾಶಿಂಗ್ಟನ್ ಸುಂದರ್.







