ಇಂಗ್ಲೆಂಡ್ ವಿರುದ್ಧ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಜಯ
ಮೊದಲ ಏಕದಿನ ಪಂದ್ಯ: ದೀಪ್ತಿ ಶರ್ಮಾ ಅರ್ಧಶತಕ

PC : ICC
ಸೌತಾಂಪ್ಟನ್, ಜು.17: ಯುಟಿಲಿಟಾ ಬೌಲ್ ನಲ್ಲಿ ಬುಧವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು 4 ವಿಕೆಟ್ಗಳ ಅಂತರದಿಂದ ರೋಚಕವಾಗಿ ಮಣಿಸಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಆಲ್ರೌಂಡರ್ ದೀಪ್ತಿ ಶರ್ಮಾ ಔಟಾಗದೆ 62 ರನ್ ಗಳಿಸಿದ್ದು, ಇವರಿಗೆ ಜೆಮಿಮಾ ರೊಡ್ರಿಗಸ್(48 ರನ್, 54 ಎಸೆತ) ಹಾಗೂ ಅಮನ್ಜೋತ್ ಕೌರ್ (ಔಟಾಗದೆ 20,14 ಎಸೆತ) ಉತ್ತಮ ಸಾಥ್ ನೀಡಿದರು. ಪರಿಣಾಮವಾಗಿ ಭಾರತ ತಂಡವು 10 ಎಸೆತಗಳು ಬಾಕಿ ಇರುವಾಗಲೇ 259 ರನ್ ಗುರಿಯನ್ನು ಚೇಸ್ ಮಾಡಿತು.
ಗೆಲ್ಲಲು 259 ರನ್ ಗುರಿ ಪಡೆದಿದ್ದ ಭಾರತ ತಂಡವು ಉತ್ತಮ ಆರಂಭ ಪಡೆದಿದ್ದು, ಆರಂಭಿಕ ಆಟಗಾರ್ತಿಯರಾದ ಸ್ಮತಿ ಮಂಧಾನ(28 ರನ್, 24 ಎಸೆತ) ಹಾಗೂ ಪ್ರತಿಕಾ ರಾವಲ್(36 ರನ್, 51 ಎಸೆತ) ಮೊದಲ ವಿಕೆಟ್ಗೆ 48 ರನ್ ಸೇರಿಸಿದರು.
ಮಂಧಾನ ಔಟಾದ ನಂತರ ಪ್ರತಿಕಾ ಹಾಗೂ ಹರ್ಲೀನ್ ಡಿಯೊಲ್(27 ರನ್, 44 ಎಸೆತ) 2ನೇ ವಿಕೆಟ್ಗೆ 46 ರನ್ ಜೊತೆಯಾಟ ನಡೆಸಿದರು. ಪ್ರತಿಕಾ ರಾವಲ್ ಔಟಾದ ಬೆನ್ನಿಗೆ ಡಿಯೊಲ್ ರನೌಟಾದಾಗ ಭಾರತ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತು. ರನ್ ಚೇಸ್ಗೆ ಬಲ ಬರಲು ಉತ್ತಮ ಜೊತೆಯಾಟದ ಅಗತ್ಯವಿತ್ತು. ಆಗ ದೀಪ್ತಿ ಶರ್ಮಾ(ಔಟಾಗದೆ 62,64ಎಸೆತ, 3 ಬೌಂಡರಿ, 1 ಸಿಕ್ಸರ್)ಹಾಗೂ ಜೆಮಿಮಾ ರೊಡ್ರಿಗಸ್(48 ರನ್, 54 ಎಸೆತ, 5 ಬೌಂಡರಿ) ಅವರು 5ನೇ ವಿಕೆಟ್ಗೆ 90 ರನ್ ಜೊತೆಯಾಟ ನಡೆಸಿ ಪಂದ್ಯವನ್ನು ಭಾರತ ತಂಡದತ್ತ ವಾಲಿಸಿದರು.
ಕೇವಲ 14 ಎಸೆತಗಳಲ್ಲಿ 20 ರನ್ ಗಳಿಸಿದ ಅಮನ್ಜೋತ್ ಅವರು ದೀಪ್ತಿ ಜೊತೆಗೆ 7ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 23 ಎಸೆತಗಳಲ್ಲಿ 33 ರನ್ ಸೇರಿಸಿ ಇನಿಂಗ್ಸ್ಗೆ ಅಂತಿಮ ಸ್ಪರ್ಶ ನೀಡಿದರು. ಭಾರತವು 48.2 ಓವರ್ಗಳಲ್ಲಿ ಗೆಲುವಿನ ದಡ ಸೇರಿತು. ಮಹಿಳೆಯರ ಕ್ರಿಕೆಟ್ನಲ್ಲಿ 2ನೇ ಬಾರಿ ಗರಿಷ್ಠ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿತು.
ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಚೊಚ್ಚಲ ಪಂದ್ಯವನ್ನಾಡಿದ ಕ್ರಾಂತಿ ಗೌಡ್(2-55) ಅವರು ಆರಂಭಿಕ ಆಟಗಾರ್ತಿಯರಾದ ಆ್ಯಮಿ ಜೋನ್ಸ್(1 ರನ್) ಹಾಗೂ ಟಮ್ಮಿ ಬೀಮೌಂಟ್(5 ರನ್) ಅವರನ್ನು ಪವರ್ ಪ್ಲೇ ವೇಳೆ ಔಟ್ ಮಾಡಿದರು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಕೆಟ್ ಖಾತೆ ತೆರೆ ಎಳೆದರು.
3ನೇ ವಿಕೆಟ್ ಗೆ 71 ರನ್ ಜೊತೆಯಾಟ ನಡೆಸಿದ ನಾಯಕಿ ನ್ಯಾಟ್ ಸಿವೆರ್-ಬ್ರಂಟ್ (41 ರನ್, 52 ಎಸೆತ) ಹಾಗೂ ಎಮ್ಮಾ ಲ್ಯಾಂಬ್(39 ರನ್, 50 ಎಸೆತ) ತಂಡವನ್ನು ಆಧರಿಸಿದರು. ಸ್ನೇಹಾ ರಾಣಾ ಅವರು 19ನೇ ಹಾಗೂ 21ನೇ ಓವರ್ನಲ್ಲಿ ಕ್ರೀಸ್ನಲ್ಲಿ ನೆಲೆವೂರಿದ್ದ ಈ ಇಬ್ಬರು ಆಟಗಾರ್ತಿಯರನ್ನು ಪೆವಿಲಿಯನ್ ಗೆ ಅಟ್ಟಿದರು. ಭಾರತವನ್ನು ಮತ್ತೆ ಸ್ಪರ್ಧೆಯಲ್ಲಿಸಿದರು.
5ನೇ ವಿಕೆಟ್ ಗೆ 106 ರನ್ ಜೊತೆಯಾಟದಲ್ಲಿ ಭಾಗಿಯಾದ ಸೋಫಿಯಾ ಡಂಕ್ಲೆ(83 ರನ್, 92 ಎಸೆತ, 9 ಬೌಂಡರಿ)ಹಾಗೂ ಅಲಿಸ್ ಡೇವಿಡ್ ಸನ್-ರಿಚರ್ಡ್ಸ್(53 ರನ್, 73 ಎಸೆತ, 2ಬೌಂಡರಿ)ಅವರು ಆತಿಥೇಯ ತಂಡವು 250 ರನ್ ಕ್ರಮಿಸಲು ನೆರವಾದರು. ಅಂತಿಮವಾಗಿ ಇಂಗ್ಲೆಂಡ್ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 258 ರನ್ ಗಳಿಸಿದೆ. ಆದರೆ ಇದು ಇಂಗ್ಲೆಂಡ್ ತಂಡದ ಗೆಲುವಿಗೆ ಸಾಕಾಗಲಿಲ್ಲ.







