2ನೇ ಏಕದಿನ | ಆಸ್ಟ್ರೇಲಿಯ ವಿರುದ್ಧ ಭಾರತದ ಮಹಿಳಾ ತಂಡಕ್ಕೆ ಭರ್ಜರಿ ಜಯ

Credit: X/@BCCIWomen
ಚಂಡಿಗಡ, ಸೆ.17: ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಸಿಡಿಸಿದ ಆಕರ್ಷಕ ಶತಕ(117 ರನ್,91 ಎಸೆತ, 14 ಬೌಂಡರಿ, 4 ಸಿಕ್ಸರ್), ವೇಗದ ಬೌಲರ್ ಕ್ರಾಂತಿ ಗೌಡ್(3-28) ನೇತೃತ್ವದ ಬೌಲರ್ಗಳ ಕರಾರುವಾಕ್ ಬೌಲಿಂಗ್ ದಾಳಿಯ ಸಹಾಯದಿಂದ ಭಾರತದ ಮಹಿಳೆಯರ ಕ್ರಿಕೆಟ್ ತಂಡ ಆಸ್ಟ್ರೇಲಿಯ ತಂಡವನ್ನು 2ನೇ ಏಕದಿನ ಪಂದ್ಯದಲ್ಲಿ 102 ರನ್ಗಳ ಅಂತರದಿಂದ ಮಣಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.
ಬುಧವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ತಂಡವು ಮಂಧಾನ ಶತಕದ ಹೊರತಾಗಿಯೂ 49.5 ಓವರ್ಗಳಲ್ಲಿ 292 ರನ್ ಗಳಿಸಿ ಆಲೌಟಾಯಿತು.
ಗೆಲ್ಲಲು 293 ರನ್ ಬೆನ್ನಟ್ಟಿದ ಆಸ್ಟ್ರೇಲಿಯ ತಂಡವು 40.5 ಓವರ್ಗಳಲ್ಲಿ 190 ರನ್ಗೆ ಗಂಟುಮೂಟೆ ಕಟ್ಟಿತು. ಆಸೀಸ್ ಪರ ಅನಬೆಲ್ ಸದರ್ಲ್ಯಾಂಡ್(45 ರನ್, 42 ಎಸೆತ) ಹಾಗೂ ಎಲ್ಲರಿಸ್ ಪೆರ್ರಿ (44 ರನ್, 61 ಎಸೆತ)ಒಂದಷ್ಟು ಹೋರಾಟ ನೀಡಿದರು. ಉಳಿದವರು ವಿಫಲರಾದರು.
ಭಾರತದ ಪರ ಕ್ರಾಂತಿ ಯಶಸ್ವಿ ಪ್ರದರ್ಶನ ನೀಡಿದರೆ, ದೀಪ್ತಿ ಶರ್ಮಾ(2-24) ಎರಡು ವಿಕೆಟ್ ಪಡೆದರು. ರೇಣಕಾ ಸಿಂಗ್, ಸ್ನೇಹಾ ರಾಣಾ ಹಾಗೂ ಅರುಂಧತಿ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಇನಿಂಗ್ಸ್ ಆರಂಭಿಸಿದ ಮಂಧಾನ ಹಾಗೂ ಪ್ರತಿಕಾ ರಾವಲ್(25 ರನ್, 32 ಎಸೆತ)ಮೊದಲ ವಿಕೆಟ್ಗೆ 70 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಇಬ್ಬರು ಔಟಾದ ನಂತರ ಭಾರತ ಮಿನಿ ಕುಸಿತ ಕಂಡಿತು. ಭಾರತ 152 ರನ್ಗೆ 3 ವಿಕೆಟ್ ಕಳೆದುಕೊಂಡಾಗ ಜೊತೆಯಾದ ಮಂಧಾನ ಹಾಗೂ ದೀಪ್ತಿ ಶರ್ಮಾ(40 ರನ್, 53 ಎಸೆತ) 4ನೇ ವಿಕೆಟ್ಗೆ 40 ರನ್ ಸೇರಿಸಿದರು.
ಆಸ್ಟ್ರೇಲಿಯದ ಪರ ಡಾರ್ಸಿ ಬ್ರೌನ್(3-42)ಹಾಗೂ ಅಶ್ಲೆ ಗಾರ್ಡ್ನರ್(2-39) ಐದು ವಿಕೆಟ್ ಹಂಚಿಕೊಂಡರು. ಪರಿಪೂರ್ಣ ಪ್ರದರ್ಶನ ನೀಡಿದ ಭಾರತ ತಂಡದ ಸ್ಮತಿ ಮಂಧಾನ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದರು.







