ಇತಿಹಾಸ ನಿರ್ಮಿಸಿದ ಭಾರತೀಯ ಮಹಿಳಾ ತಂಡ ; ಚೊಚ್ಚಲ ಬ್ಯಾಡ್ಮಿಂಟನ್ ಏಶ್ಯ ಚಾಂಪಿಯನ್ಶಿಪ್ ಪ್ರಶಸ್ತಿ ಗೆಲುವು

Photo: PTI
ಸೆಲಂಗೊರ್ (ಮಲೇಶ್ಯ): ಬ್ಯಾಡ್ಮಿಂಟನ್ ಏಶ್ಯ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಚೊಚ್ಚಲ ಬಾರಿಗೆ ಗೆಲ್ಲುವುದರೊಂದಿಗೆ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ತಂಡವು ರವಿವಾರ ಇತಿಹಾಸ ಸೃಷ್ಟಿಸಿದೆ.
ಮಲೇಶ್ಯದ ಸೆಲಂಗೊರ್ ನಲ್ಲಿ ನಡೆದ ಪಂದ್ಯಾವಳಿಯ ಫೈನಲ್ನಲ್ಲಿ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ತಂಡವು ಥಾಯ್ಲೆಂಡ್ ತಂಡವನ್ನು 3-2 ಅಂತರದಿಂದ ಸೋಲಿಸಿತು.
ಈ ಪಂದ್ಯಾವಳಿಯಲ್ಲಿ ಭಾರತವು ಉತ್ತಮ ಗುಣಮಟ್ಟದ ಬ್ಯಾಡ್ಮಿಂಟನ್ ಆಟವನ್ನು ಪ್ರದರ್ಶಿಸಿದೆ. ಫೈನಲ್ ಹಾದಿಯಲ್ಲಿ ಅದು ಚೀನಾ, ಹಾಂಕಾಂಗ್ ಮತ್ತು ಜಪಾನ್ ತಂಡಗಳನ್ನು ಸೋಲಿಸಿದೆ.
ಫೈನಲ್ನಲ್ಲಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧೂ ಟೀಮ್ ಇಂಡಿಯದ ಮೊದಲ ಪಂದ್ಯವನ್ನು ಆಡಿದರು. ಅವರು ಥಾಯ್ಲೆಂಡ್ನ 17ನೇ ರ್ಯಾಂಕಿಂಗ್ ನ ಸುಪನಿಡ ಕಟೆತೊಂಗ್ರನ್ನು 21-12, 21-12 ಗೇಮ್ಗಳಿಂದ ಸೋಲಿಸಿದರು. ತನ್ನ ಎದುರಾಳಿಯ ಮೇಲೆ ಸಂಪೂರ್ಣ ಪ್ರಾಬಲ್ಯವನ್ನು ಸಾಧಿಸಿದ ಸಿಂಧೂ, ಪಂದ್ಯವನ್ನು ಕೇವಲ 39 ನಿಮಿಷಗಳಲ್ಲಿ ಮುಗಿಸಿದರು.
ನಂತರ ನಡೆದ ಡಬಲ್ಸ್ ಪಂದ್ಯದಲ್ಲೂ ಭಾರತದ ಟ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಮೇಲುಗೈ ಸಾಧಿಸಿದರು. ಅವರು ಥಾಯ್ಲೆಂಡ್ನ ಜೊಂಗ್ಕೊಲ್ಫನ್ ಕಿಟಿತರಕುಲು ಮತ್ತು ರವಿಂಡ ಪ್ರಜೊಂಗಿಯಲ್ ಜೋಡಿಯನ್ನು 21-16, 18-21, 21-16 ಗೇಮ್ಗಳಿಂದ ಹಿಮ್ಮೆಟ್ಟಿಸಿದರು. ಇದರೊಂದಿಗೆ ಭಾರತವು 2-0 ಅಂತರದ ಮುನ್ನಡೆ ಪಡೆಯಿತು.
ಆದರೆ, ಮೂರನೇ ಪಂದ್ಯದಲ್ಲಿ ಥಾಯ್ಲೆಂಡ್ ಪ್ರತಿಹೋರಾಟ ನೀಡಿತು. ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಥಾಯ್ಲೆಂಡ್ನ ಬುಸನನ್ ಓಂಗ್ಬಮ್ರುಂಗ್ಫನ್ ಭಾರತದ ಅಶ್ಮಿತಾ ಚಾಲಿಹರನ್ನು 21-11, 21-14 ಗೇಮ್ಗಳಿಂದ ಮಣಿಸಿದರು.
ನಂತರ ನಡೆದ ಎರಡನೇ ಡಬಲ್ಸ್ ನಲ್ಲೂ ಭಾರತೀಯರಿಗೆ ಸೋಲು ಕಾದಿತ್ತು. ಥಾಯ್ಲೆಂಡ್ನ ಬೆನ್ಯಪಾ ಐಮ್ಸಾರ್ಡ್ ಮತ್ತು ನುಂಟಕರ್ನ್ ಐಮ್ಸಾರ್ಡ್ ಭಾರತದ ಪ್ರಿಯಾ ಕೊಂಜೆಂಗ್ಬಮ್ ಮತ್ತು ಶ್ರುತಿ ಮಿಶ್ರಾ ಜೋಡಿಯನ್ನು 21-11, 21-9 ಗೇಮ್ಗಳಿಂದ ಪರಾಭವಗೊಳಿಸಿದರು. ಹಾಗಾಗಿ ಪಂದ್ಯವು ಕೊನೆಯ ಸುತ್ತಿಗೆ ತಲುಪಿತು.
ಅಂತಿಮ ಸುತ್ತಿನಲ್ಲಿ ಭಾರತವನ್ನು ಗೆಲುವಿನ ದಡ ಸೇರಿಸುವ ಹೊಣೆ 17 ವರ್ಷದ ಆನ್ಮೋಲ್ ಖರ್ಬ್ ಮೇಲೆ ಬಿತ್ತು. ಅವರು ನಿರಾಶೆಗೊಳಿಸಲಿಲ್ಲ. ಒತ್ತಡದಿಂದ ಕೂಡಿದ ನಿರ್ಣಾಯಕ ಪಂದ್ಯದಲ್ಲಿ ಅವರು 45ನೇ ವಿಶ್ವ ರ್ಯಾಂಕಿಂಗ್ನ ಪೊರ್ನ್ಪಿಚ ಚೋಯೀಕಿವೊಂಗ್ರನ್ನು 212-14, 21-9 ಗೇಮ್ಗಳಿಂದ ಪರಾಭವಗೊಳಿಸಿದರು. ಆ ಮೂಲಕ ಭಾರತಕ್ಕೆ ಐತಿಹಾಸಿಕ ಗೆಲುವೊಂದನ್ನು ದೊರಕಿಸಿಕೊಟ್ಟರು.







