ಏಷ್ಯಾ ಕಪ್ ಗೆದ್ದರೂ ಟ್ರೋಫಿ ಸ್ವೀಕರಿಸದ ಭಾರತ ಮಹಿಳಾ ತಂಡ; ‘ಇದು ಬಿಸಿಸಿಐ ನಿರ್ಧಾರ’ ಎಂದ ಕೋಚ್

Photo: x.com/moneycontrolcom
ದುಬೈ: ಮಹಿಳಾ ಏಷ್ಯಾ ಕಪ್ 2026ರ ಫೈನಲ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡ, ಟ್ರೋಫಿ ಸ್ವೀಕರಿಸದಿರುವ ತೀರ್ಮಾನ ಕೈಗೊಂಡಿದೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 72 ರನ್ ಗಳ ಭರ್ಜರಿ ಜಯ ಸಾಧಿಸಿದ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡ, ದಾಖಲೆಯ 8ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಆದರೆ, ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಹಾಗೂ ಪಾಕಿಸ್ತಾನದ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿದೆ ಎನ್ನಲಾಗಿದ್ದು, ಇದರೊಂದಿಗೆ ಹಳೆಯ ವಿವಾದ ಮತ್ತೆ ಭುಗಿಲೆದ್ದಿದೆ.
ರಾತ್ರಿ 11:20ಕ್ಕೆ ಪಂದ್ಯ ಮುಕ್ತಾಯಗೊಂಡರೂ, ಪ್ರಶಸ್ತಿ ಪ್ರದಾನ ಸಮಾರಂಭ ಮಧ್ಯರಾತ್ರಿ 12:05ರವರೆಗೆ ಆರಂಭವಾಗದೆ ವಿಳಂಬವಾಯಿತು.
ಫೈನಲ್ ಗೆಲುವಿನ ಬಳಿಕ ಮೈದಾನದಲ್ಲಿ ನಡೆದಿದ್ದೇನು?
ಶ್ರೀಲಂಕಾದ ಮಾಜಿ ಆಟಗಾರ ಫರ್ವೇಝ್ ಮಹರೂಫ್ ಅವರು ತಡವಾಗಿ ಆರಂಭವಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊದಲು ಪಂದ್ಯದ ಅಧಿಕಾರಿಗಳು ಹಾಗೂ ರನ್ನರ್ಅಪ್ ಶ್ರೀಲಂಕಾ ತಂಡವನ್ನು ವೇದಿಕೆಗೆ ಆಹ್ವಾನಿಸಿದರು.
ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಶ್ರೀಲಂಕಾ ತಂಡಕ್ಕೆ ರನ್ನರ್ಅಪ್ ಚೆಕ್ ಹಸ್ತಾಂತರಿಸಿದರು. ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿಯ (SLC) ಮಧ್ಯಂತರ ಮುಖ್ಯಸ್ಥ ಎರಾನ್ ವಿಕ್ರಮರತ್ನೆ ಅವರು ಆಟಗಾರ್ತಿಯರಿಗೆ ಪದಕಗಳನ್ನು ವಿತರಿಸಿದರು.
ಶ್ರೀಲಂಕಾ ತಂಡದ ಸನ್ಮಾನ ಮುಗಿದ ಬಳಿಕ ಭಾರತ ತಂಡ ವೇದಿಕೆಗೆ ಬರಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದರು. ಆದರೆ, ನಿರೂಪಕ ಮಹರೂಫ್ ಅವರು ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯಗೊಂಡಿದೆ ಎಂದು ಹಠಾತ್ತನೆ ಘೋಷಿಸಿದರು.
ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು ಅವರಿಗೆ ಚೆಕ್ ಹಸ್ತಾಂತರಿಸಿದ ಬಳಿಕ ನಖ್ವಿ ಕ್ರೀಡಾಂಗಣದಿಂದ ನಿರ್ಗಮಿಸಿದರು. ಆದರೆ, ಕಳೆದ ವರ್ಷದಂತೆ ಈ ಬಾರಿ ಅವರು ತಮ್ಮೊಂದಿಗೆ ಟ್ರೋಫಿಯನ್ನು ಕೊಂಡೊಯ್ಯಲಿಲ್ಲ.
ಮೈದಾನದ ಮತ್ತೊಂದು ಬದಿಯಲ್ಲಿ ಪಂದ್ಯ ಮುಗಿದ ಬಳಿಕ ಭಾರತೀಯ ಆಟಗಾರ್ತಿಯರು ಒಟ್ಟಾಗಿ ಸೇರಿ ಸಂಭ್ರಮಿಸಿದರು. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಾಗೂ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕೂಡ ಮೈದಾನದಲ್ಲಿ ಹಾಜರಿದ್ದರು.
ಸೈಕಿಯಾ ಹಾಗೂ ಶುಕ್ಲಾ ಅವರು ನಂದಿನಿ ಶರ್ಮಾಗೆ ‘ಬೆಸ್ಟ್ ಫೀಲ್ಡರ್’ ಪದಕ ಪ್ರದಾನ ಮಾಡಿದರು. ಬಳಿಕ ಸೈಕಿಯಾ ಆಟಗಾರ್ತಿಯರನ್ನು ಉದ್ದೇಶಿಸಿ ಮಾತನಾಡಿ ಅಭಿನಂದಿಸಿದರು. ನಂತರ ಇಡೀ ಭಾರತೀಯ ತಂಡ ಡ್ರೆಸ್ಸಿಂಗ್ ಕೋಣೆಗೆ ಮರಳಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ಕೋಚ್ ಅಮೋಲ್ ಮುಜುಂದಾರ್, “ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸದಿರುವುದು ಬಿಸಿಸಿಐ ತೆಗೆದುಕೊಂಡ ನಿಲುವು” ಎಂದು ಸ್ಪಷ್ಟಪಡಿಸಿದರು.
ಇದೇ ಮೊದಲಲ್ಲ
ಈ ಬಿಕ್ಕಟ್ಟು 2025ರ ಸೆಪ್ಟೆಂಬರ್ ನಲ್ಲಿ ನಡೆದ ಪುರುಷರ ಏಷ್ಯಾ ಕಪ್ ಫೈನಲ್ ನಲ್ಲಿ ನಡೆದ ಘಟನೆಯನ್ನು ಮತ್ತೊಮ್ಮೆ ನೆನಪಿಸಿದೆ.
ಅಂದೂ ಇದೇ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಗೆದ್ದಿತ್ತು. ಆಗಲೂ ಮೊಹ್ಸಿನ್ ನಖ್ವಿ ಅವರ ಉಪಸ್ಥಿತಿಯಿಂದಾಗಿ ಸುಮಾರು ಒಂದು ಗಂಟೆ ಕಾಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಕ್ಕಟ್ಟು ಉಂಟಾಗಿತ್ತು.
ಅಂತಿಮವಾಗಿ ನಖ್ವಿ ಅವರ ಆದೇಶದ ಮೇರೆಗೆ ಟ್ರೋಫಿಯನ್ನು ಕ್ರೀಡಾಂಗಣದಿಂದಲೇ ತೆಗೆದುಕೊಂಡು ಹೋಗಲಾಗಿತ್ತು. ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು ಟ್ರೋಫಿ ಇಲ್ಲದೆಯೇ ವೇದಿಕೆಯಲ್ಲಿ ಕೈಗಳನ್ನು ಎತ್ತಿ ಸಂಭ್ರಮಿಸಿತ್ತು.
ಆ ಟ್ರೋಫಿ ಇಂದಿಗೂ ದುಬೈನ ಎಸಿಸಿ ಕಚೇರಿಯಲ್ಲೇ ಉಳಿದುಕೊಂಡಿದೆ.






