ಡಬ್ಲ್ಯುಟಿಸಿ ಫೈನಲ್ ನಲ್ಲಿ ಭಾರತದ ಅನುಪಸ್ಥಿತಿ ; ಲಾರ್ಡ್ಸ್ ಗೆ 45 ಕೋಟಿ ರೂ. ಆದಾಯದಲ್ಲಿ ಖೋತಾ?

PC : PTI
ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ ಗೆ ತೇರ್ಗಡೆಗೊಳ್ಳಲು ಭಾರತ ತಂಡವು ವಿಫಲವಾಗಿರುವುದರಿಂದ ಟಿಕೆಟ್ ಮಾರಾಟದಿಂದ ಬರುವ ಸುಮಾರು 45 ಕೋಟಿ ರೂ. ಆದಾಯವನ್ನು ಲಂಡನ್ ನ ಲಾರ್ಡ್ಸ್ ಕ್ರಿಕೆಟ್ ಮೈದಾನವು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ‘ದ ಟೈಮ್ಸ್’ನಲ್ಲಿ ಸೋಮವಾರ ಪ್ರಕಟಗೊಂಡ ವರದಿಯೊಂದು ಅಭಿಪ್ರಾಯಪಟ್ಟಿದೆ.
ಭಾರತವು ಫೈನಲ್ ತಲುಪುತ್ತದೆ ಎಂಬ ನಿರೀಕ್ಷೆಯಲ್ಲಿ ಮ್ಯಾರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಮ್ಸಿಸಿ) ತನ್ನ ಟಿಕೆಟ್ ದರವನ್ನು ಗರಿಷ್ಠ ಮಟ್ಟದಲ್ಲಿ ಇಟ್ಟಿದೆ. ಟಿಕೆಟ್ ಗಳಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಒಳ್ಳೆಯ ಬೇಡಿಕೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಅದು ನಿರ್ಧಾರವನ್ನು ತೆಗೆದುಕೊಂಡಿತ್ತು. ಆದರೆ, ಭಾರತವು ಆಸ್ಟ್ರೇಲಿಯದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 1-3 ಅಂತರದಿಂದ ಸೋತ ಬಳಿಕ, ಡಬ್ಲ್ಯುಟಿಸಿ ಫೈನಲ್ ಗೆ ಅರ್ಹತೆ ಪಡೆಯಲು ವಿಫಲವಾಯಿತು. ಹಾಗಾಗಿ, ಫೈನಲ್ ಪಂದ್ಯದ ಟಿಕೆಟ್ ದರವನ್ನು ಪರಿಷ್ಕರಿಸಬೇಕಾಯಿತು.
‘‘ಫೈನಲ್ ನಲ್ಲಿ ಭಾರತ ಆಡುವುದಿಲ್ಲ ಎನ್ನುವುದು ಖಚಿತವಾದ ಬಳಿಕ, ಎಮ್ಸಿಸಿಯು ಟಿಕೆಟ್ ದರವನ್ನು ಇಳಿಸಲು ಮುಂದಾಯಿತು. ದುಬಾರಿ ಟಿಕೆಟ್ ನ ಹಿನ್ನೆಲೆಯಲ್ಲಿ ಸಂಭಾವ್ಯ ಕಡಿಮೆ ಪ್ರೇಕ್ಷಕರ ಸಮ್ಮುಖದಲ್ಲಿ ಆಡುವ ಬದಲು, ತುಂಬಿದ ಹಾಗೂ ಗಿಜಿಗುಡುವ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯುವಂತಾಗಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು’’ ಎಂದು ವರದಿ ಹೇಳಿದೆ.
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯ ನಡುವಿನ ಫೈನಲ್ ಪಂದ್ಯದ ಟಿಕೆಟ್ ದರವನ್ನು ಈಗ 40 ಪೌಂಡ್ (4,500 ರೂ.) ಮತ್ತು 90 ಪೌಂಡ್ (10,100 ರೂ.) ನಡುವೆ ಇರಿಸಲಾಗಿದೆ. ‘‘ಪರಿಷ್ಕೃತ ಟಿಕೆಟ್ ದರವು ಮೂಲ ಟಿಕೆಟ್ ದರಕ್ಕಿಂತ ಸುಮಾರು 50 ಪೌಂಡ್ (ಸುಮಾರು 5,600 ರೂ.) ಅಗ್ಗವಾಗಿದೆ’’ ಎಂದು ವರದಿ ತಿಳಿಸಿದೆ.
ಡಬ್ಲ್ಯುಟಿಸಿ ಫೈನಲ್ ಜೂನ್ 11ರಿಂದ 15ರವರೆಗೆ ನಡೆಯಲಿದೆ.