ಮೊದಲ ಆವೃತ್ತಿಯ ಟಿ-20 ವಿಶ್ವಕಪ್ ಗೆದ್ದ ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡ

ಕೊಲಂಬೊ, ನ.23: ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿರುವ ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡವು ಮೊದಲ ಆವೃತ್ತಿಯ ಟಿ-20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ರವಿವಾರ ಸರವಣಮುತ್ತು ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನೇಪಾಳ ತಂಡವನ್ನು ಏಳು ವಿಕೆಟ್‌ಗಳ ಅಂತರದಿಂದ ಮಣಿಸಿತು. ಆರು ತಂಡಗಳಿದ್ದ ಟೂರ್ನಿಯಲ್ಲಿ ಭಾರತವು ಪ್ರತೀ ಎದುರಾಳಿಗೆ ಸೋಲುಣಿಸಿದೆ.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ನೇಪಾಳ ತಂಡವನ್ನು 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 114 ರನ್‌ಗೆ ನಿಯಂತ್ರಿಸಿತು. ನೇಪಾಳ ತಂಡ ಇಡೀ ಇನಿಂಗ್ಸ್‌ನಲ್ಲಿ ಕೇವಲ ಒಂದು ಬೌಂಡರಿ ಗಳಿಸಿತು. ಸರಿತಾ 38 ಎಸೆತಗಳಲ್ಲಿ 35 ರನ ಗಳಿಸಿದರು. ಭಾರತದ ಬೌಲರ್‌ಗಳು ಎಲ್ಲ ವಿಭಾಗಗಳಲ್ಲೂ ಒತ್ತಡ ಹೇರಿ ನೇಪಾಳ ತಂಡದ ರನ್ ರೇಟ್ ಏರದಂತೆ ನೋಡಿಕೊಂಡರು.
ಗೆಲ್ಲಲು ಸುಲಭ ಸವಾಲು ಪಡೆದಿದ್ದ ಭಾರತ ತಂಡವು ಕೇವಲ 12.1 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕೆ 117 ರನ್ ಗಳಿಸಿತು. ಫುಲಾ ಸರೇನ್ಸ್ 27 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಿತ 44 ರನ್ ಗಳಿಸಿದರು.
ಪಂದ್ಯಾವಳಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿರುವ ಭಾರತ ತಂಡವು ಲೀಗ್ ಹಂತದಲ್ಲಿ ಶ್ರೀಲಂಕಾ, ಆಸ್ಟ್ರೇಲಿಯ, ನೇಪಾಳ, ಅಮೆರಿಕ ಹಾಗೂ ಪಾಕಿಸ್ತಾನ ತಂಡವನ್ನು ಮಣಿಸಿತು. ಸೆಮಿ ಫೈನಲ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ 9 ವಿಕೆಟ್‌ಗಳಿಂದ ಜಯ ಸಾಧಿಸಿತು. ಅಂತಿಮ-4ರ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿರುವ ನೇಪಾಳ ತಂಡ ಫೈನಲ್‌ಗೆ ಪ್ರವೇಶಿಸಿತ್ತು.







