ಇಂಡೋನೇಷ್ಯ ಮಾಸ್ಟರ್ಸ್: ಪ್ರಣಯ್ ಗೆ ಜಯ

ಎಸ್.ಎಸ್. ಪ್ರಣಯ್ |Photo Credit : PTI
ಜಕಾರ್ತ, ಸೆ. 2: ಅಗ್ರ ಶ್ರೇಯಾಂಕದ ಎಸ್.ಎಸ್. ಪ್ರಣಯ್ ಪುರುಷರ ಸಿಂಗಲ್ಸ್ನ ಅಂತಿಮ–32ರ ಸುತ್ತಿನ ಪಂದ್ಯದಲ್ಲಿ ಮೊದಲ ಗೇಮ್ ಸೋಲಿನಿಂದ ಬೇಗನೆ ಚೇತರಿಸಿಕೊಂಡು ಚೈನೀಸ್ ತೈಪೆಯ ಲಿಯಾವೊ ಜುಯೊ ಫು ಅವರನ್ನು ಮಣಿಸಿ ಅಂತಿಮ–16ರ ಸುತ್ತು ಪ್ರವೇಶಿಸಿದ್ದಾರೆ.
ವಿಶ್ವದ ನಂ. 39ನೇ ಆಟಗಾರ ಪ್ರಣಯ್ ಬುಧವಾರ ಒಂದು ಗಂಟೆ ಹಾಗೂ ನಾಲ್ಕು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಲಿಯಾವೊರನ್ನು 18–21, 21–15, 21–19 ಗೇಮ್ ಗಳ ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಚೀನಾದ ಕ್ಸಿಯಾನ್ ಚೆನ್ಝು ಅವರ ಸವಾಲನ್ನು ಎದುರಿಸಲಿದ್ದಾರೆ.
ಜುಲೈನಲ್ಲಿ ನಡೆದಿದ್ದ ತೈಪೆ ಓಪನ್ ನಲ್ಲಿ ಅಂತಿಮ–16ರ ಸುತ್ತಿನಲ್ಲಿ ನಿರ್ಗಮಿಸಿದ್ದ ಪ್ರಣಯ್ ಪ್ರಸಕ್ತ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಬೈ ಪಡೆದಿದ್ದರು. ಹೊಸದಿಲ್ಲಿಯಲ್ಲಿ ನಡೆದಿದ್ದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಅವರು ಭಾಗವಹಿಸಿರಲಿಲ್ಲ.
ಮಹಿಳೆಯರ ಸಿಂಗಲ್ಸ್ನಲ್ಲಿ ಅಗ್ರ ಶ್ರೇಯಾಂಕದ ಅಶ್ಮಿತಾ ಚಲಿಹಾ ಥಾಯ್ಲೆಂಡ್ನ ಪೊರ್ನ್ಪಿಚಾ ಚೊಕೀವಾಂಗ್ರನ್ನು 21–17, 23–21 ಗೇಮ್ಗಳ ಅಂತರದಿಂದ ಮಣಿಸಿ ಅಂತಿಮ–16ರ ಸುತ್ತಿಗೆ ಅರ್ಹತೆ ಪಡೆದರು.
ಮೂರನೇ ಶ್ರೇಯಾಂಕದ ಅನ್ಮೋಲ್ ಖರ್ಬ್ ಹಾಂಕಾಂಗ್ನ ಲಿಯಾಂಗ್ ವಿಂಗ್ರನ್ನು 21–17, 21–8 ಗೇಮ್ ಗಳ ಅಂತರದಿಂದ ಮಣಿಸಿದರು.






