ಇಂಡೋನೇಶ್ಯ ಓಪನ್| ಪಿ.ವಿ. ಸಿಂಧು ಶುಭಾರಂಭ
ಲಕ್ಷ್ಯ ಸೇನ್, ಪ್ರಣಯ್ಗೆ ಮೊದಲ ಸುತ್ತಿನಲ್ಲೇ ಸೋಲು

ಪಿ.ವಿ. ಸಿಂಧು | PC : NDTV
ಜಕಾರ್ತ : ಇಂಡೋನೇಶ್ಯ ಓಪನ್ ಸೂಪರ್-1000 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಭಾರತದ ಹಿರಿಯ ಆಟಗಾರ್ತಿ ಪಿ.ವಿ. ಸಿಂಧು ಶುಭಾರಂಭ ಮಾಡಿದ್ದಾರೆ.
ಮಂಗಳವಾರ ಒಂದು ಗಂಟೆ, 19 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ 2 ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ತನ್ನ ದೀರ್ಘಕಾಲದ ಎದುರಾಳಿ ನೊರೊಮಿ ಒಕುಹರಾರನ್ನು 22-20, 21-23, 21-15 ಗೇಮ್ಗಳಿಂದ ಮಣಿಸಿದರು.
ಆದರೆ ಲಕ್ಷ್ಯ ಸೇನ್ ಹಾಗೂ ಎಚ್.ಎಸ್.ಪ್ರಣಯ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
2021ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ವಿಜೇತ ಸೇನ್ ಅವರು 65 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ವಿಶ್ವದ ನಂ.2ನೇ ಆಟಗಾರ, ಚೀನಾ ಶಿ ಯು ಕ್ಯೂ ವಿರುದ್ಧ 11-21, 22-20, 15-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಬೆನ್ನುನೋವಿನಿಂದ ಚೇತರಿಸಿಕೊಂಡು ವಾಪಸಾಗಿರುವ 23ರ ಹರೆಯದ ಸೇನ್ 2ನೇ ಗೇಮ್ನಲ್ಲಿ ಪ್ರತಿರೋಧ ಒಡ್ಡಿದ್ದು, 22-20 ಅಂತರದಿಂದ ಜಯ ಸಾಧಿಸಿ ಪಂದ್ಯವನ್ನು 3ನೇ ಗೇಮ್ಗೆ ವಿಸ್ತರಿಸಿದರು.
2023ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ವಿಜೇತ ಎಚ್.ಎಸ್.ಪ್ರಣಯ್ 1,450,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಇಂಡೋನೇಶ್ಯದ ಅಲ್ವಿ ಫರ್ಹಾನ್ ವಿರುದ್ಧ 17-21, 18-21 ಅಂತರದಿಂದ ಶರಣಾದರು.
ಮಾಜಿ ವಿಶ್ವ ಚಾಂಪಿಯನ್ಗಳಾದ ಸಿಂಧು ಹಾಗೂ ಒಕುಹರಾ ಇತ್ತೀಚೆಗಿನ ದಿನಗಳಲ್ಲಿ ಗೆಲುವಿಗಾಗಿ ಪರದಾಡುತ್ತಿದ್ದಾರೆ. ಸಿಂಧು ಈ ವರ್ಷದ ಜನವರಿಯಲ್ಲಿ ಇಂಡಿಯಾ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿರುವುದು ಅವರ ಉತ್ತಮ ಸಾಧನೆಯಾಗಿದೆ.
ಇಂದಿನ ಗೆಲುವಿನೊಂದಿಗೆ ಸಿಂಧು ಅವರು ಒಕುಹರಾ ವಿರುದ್ಧ ಹೆಡ್-ಟು-ಹೆಡ್ ದಾಖಲೆಯನ್ನು 11-9ಕ್ಕೆ ಉತ್ತಮಪಡಿಸಿಕೊಂಡಿದ್ದು, 2017ರ ವಿಶ್ವ ಚಾಂಪಿಯನ್ಶಿಪ್ ಸೋಲಿಗೆ ಸೇಡು ತೀರಿಸಿಕೊಂಡರು.
ಸಿಂಧು 2ನೇ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್ನ ಪೊರ್ನ್ಪಾವೀ ಚೊಚಿವೊಂಗ್ರನ್ನು ಎದುರಿಸಲಿದ್ದಾರೆ.
ಇನ್ನುಳಿದ ಮಹಿಳೆಯರ ಸಿಂಗಲ್ಸ್ ಪಂದ್ಯಗಳಲ್ಲಿ ಮಾಳವಿಕಾ ಬನ್ಸೋಡ್ ಇಂಡೋನೇಶ್ಯದ ಪುತ್ರಿ ಕುಸುಮಾ ವರ್ದಾನಿ ವಿರುದ್ದ 21-16, 16-15 ಅಂತರದಿಂದ ಮುನ್ನಡೆಯಲ್ಲಿದ್ದಾಗ ಮಂಡಿನೋವಿನಿಂದಾಗಿ ನಿವೃತ್ತಿಯಾಗಿದ್ದರು.
ಅನುಪಮಾ ಉಪಾಧ್ಯಾಯ ಕೊರಿಯಾದ ಕಿಮ್ ಗಾ ಯುನ್ ಎದುರು 15-21, 9-21 ಸೆಟ್ಗಳಿಂದ ಸೋತರೆ, ರಕ್ಷಿತಾ ರಾಮ್ರಾಜ್ ಅವರು ಥಾಯ್ಲೆಂಡ್ನ ಸುಪನಿದಾ ವಿರುದ್ಧ 21-14, 15-21, 12-21 ಅಂತರದಿಂದ ಸೋತಿದ್ದಾರೆ.







