ಇನ್ಫಾಂಟಿನೊ ಅವರು ಟ್ರಂಪ್ ಆಡಳಿತದ ನೆರವು ಕೋರಿಲ್ಲ: ಫಿಫಾ

ಡೊನಾಲ್ಡ್ ಟ್ರಂಪ್ , ಜಾನೀ ಇನ್ಫಾಂಟಿನೊ | Photo Credit ; AP
ಹೊಸದಿಲ್ಲಿ, ಆ. 4: ತನ್ನ ವಿಶ್ವಕಪ್ ವಾಣಿಜ್ಯ ಹಕ್ಕುಗಳ ಒಂದು ಪಾಲನ್ನು ಮಾರಾಟ ಮಾಡುವ ಫಿಫಾದ ಪ್ರಸ್ತಾವವು ಹಿನ್ನಡೆ ಅನುಭವಿಸಿದ ನಂತರ, ಅದರ ಅಧ್ಯಕ್ಷ ಜಾನೀ ಇನ್ಫಾಂಟಿನೊ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಿಂದ ಬೆಂಬಲ ಕೋರಿದ್ದಾರೆ ಎಂಬ ವರದಿಗಳನ್ನು ಫಿಫಾ ಮಂಗಳವಾರ ತಳ್ಳಿಹಾಕಿದೆ.
ಪ್ರಸ್ತಾಪವನ್ನು ಕೈಬಿಟ್ಟ ನಂತರ ಇನ್ಫಾಂಟಿನೊ, ಟ್ರಂಪ್ ಅವರನ್ನು ಸಂಪರ್ಕಿಸಲು ವಿಫಲ ಯತ್ನ ನಡೆಸಿದ್ದಾರೆ ಎಂದು ‘ನ್ಯೂಯಾರ್ಕ್ ಪೋಸ್ಟ್’ ವರದಿ ಮಾಡಿದ ಬೆನ್ನಲ್ಲೇ ಈ ಸ್ಪಷ್ಟನೆ ಬಂದಿದೆ.
‘‘ಫಿಫಾ ಅಧ್ಯಕ್ಷರು ಇತ್ತೀಚಿನ ದಿನಗಳಲ್ಲಿ ಅಮೆರಿಕ ಅಧ್ಯಕ್ಷರಿಗಾಗಲಿ ಅಥವಾ ಅವರ ಆಡಳಿತದ ಯಾವುದೇ ಸದಸ್ಯರಿಗಾಗಲಿ ಕರೆ ಮಾಡಿಲ್ಲ. ಇದು ಸಂಪೂರ್ಣ ಕಾಲ್ಪನಿಕ’’ ಎಂದು ಫಿಫಾವು ‘ರಾಯ್ಟರ್ಸ್’ಗೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಜಾಗತಿಕ ಫುಟ್ಬ್ಬಾಲ್ ಆಡಳಿತ ಮಂಡಳಿಯ ವಾಣಿಜ್ಯ ಆಸ್ತಿಗಳ ಒಂದು ಭಾಗವನ್ನು ಬಳಸಿಕೊಂಡು, ಖಾಸಗಿ ಹೂಡಿಕೆದಾರರ ಬೆಂಬಲದಿಂದ ನೂತನ ಸಂಸ್ಥೆಯನ್ನು ರಚಿಸುವ ಇನ್ಫಾಂಟಿನೊ ಅವರ ಪ್ರಯತ್ನ ವಿಫಲವಾದ ಬಳಿಕ ಈ ಪ್ರಸ್ತಾವದ ವಿರುದ್ಧದ ಆಕ್ರೋಶ ತೀವ್ರಗೊಂಡಿದೆ.
ಈ ಯೋಜನೆ ರದ್ದಾದ ಬೆನ್ನಲ್ಲೇ, 2027 ರಿಂದ 2031 ರವರೆಗೆ ಫಿಫಾ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಇನ್ಫಾಂಟಿನೊ ಆಯ್ಕೆಯಾಗುವ ಸಾಧ್ಯತೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ.




