ಗಾಯಗೊಂಡಿರುವ ಪಂಜಾಬ್ ಕಿಂಗ್ಸ್ ಬೌಲರ್ ಕಾಗಿಸೊ ರಬಾಡ ಸ್ವದೇಶಕ್ಕೆ ವಾಪಸ್
ಟಿ20 ವಿಶ್ವಕಪ್ ತಯಾರಿಗೆ ಧಕ್ಕೆಯಾಗದು ಎಂದ ದಕ್ಷಿಣ ಆಫ್ರಿಕಾ
![ಗಾಯಗೊಂಡಿರುವ ಪಂಜಾಬ್ ಕಿಂಗ್ಸ್ ಬೌಲರ್ ಕಾಗಿಸೊ ರಬಾಡ ಸ್ವದೇಶಕ್ಕೆ ವಾಪಸ್ ಗಾಯಗೊಂಡಿರುವ ಪಂಜಾಬ್ ಕಿಂಗ್ಸ್ ಬೌಲರ್ ಕಾಗಿಸೊ ರಬಾಡ ಸ್ವದೇಶಕ್ಕೆ ವಾಪಸ್](https://www.varthabharati.in/h-upload/2024/05/15/1266780-14.webp)
ರಬಾಡ | PC : PTI
ಹೊಸದಿಲ್ಲಿ: ಗಾಯದ ಸಮಸ್ಯೆ ಎದುರಿಸುತ್ತಿರುವ ವೇಗದ ಬೌಲರ್ ಕಾಗಿಸೊ ರಬಾಡ ಐಪಿಎಲ್ ಟಿ20 ಟೂರ್ನಮೆಂಟ್ ಅನ್ನು ತೊರೆದು ಸ್ವದೇಶಕ್ಕೆ ಮರಳಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಬುಧವಾರ ತಿಳಿಸಿದೆ.
ರಬಾಡ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು 11 ಪಂದ್ಯಗಳಲ್ಲಿ 11 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಪಂಜಾಬ್ ಈಗಾಗಲೇ ಐಪಿಎಲ್ ಪ್ಲೇ ಆಫ್ ರೇಸ್ನಿಂದ ನಿರ್ಗಮಿಸಿದ್ದು ಮೇ 19ರಂದು ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.
28ರ ಹರೆಯದ ರಬಾಡ ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿದ್ದಾರೆ. ದಕ್ಷಿಣ ಆಫ್ರಿಕಾದ ವೈದ್ಯಕೀಯ ತಂಡವು ಅವರ ಮೇಲೆ ನಿಕಟವಾಗಿ ನಿಗಾವಹಿಸಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
ರಬಾಡ ಗಾಯಗೊಂಡಿರುವುದು ಮುಂದಿನ ತಿಂಗಳು ವೆಸ್ಟ್ಇಂಡೀಸ್ ಹಾಗೂ ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಅವರ ತಯಾರಿಯ ಮೇಲೆ ಪರಿಣಾಮಬೀರುವ ಸಾಧ್ಯತೆಯಿಲ್ಲ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ತಿಳಿಸಿದೆ.
ದಕ್ಷಿಣ ಆಫ್ರಿಕಾವು ಜೂನ್ 3ರಂದು ನ್ಯೂಯಾರ್ಕ್ನಲ್ಲಿ ಶ್ರೀಲಂಕಾ ವಿರುದ್ಧ ಆಡುವ ಮೂಲಕ ವಿಶ್ವಕಪ್ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.