ಗಾಯದ ಸಮಸ್ಯೆ: ದೇಶೀಯ ಕ್ರಿಕೆಟ್ ನಿಂದ ಸೂರ್ಯಕುಮಾರ್ ಹೊರಕ್ಕೆ
ಐಪಿಎಲ್ ನ ಕೆಲವು ಪಂದ್ಯಗಳಿಂದಲೂ ಹೊರಗುಳಿವ ಸಾಧ್ಯತೆ

ಸೂರ್ಯ ಕುಮಾರ್ ಯಾದವ್ | Photo; X
ಮುಂಬೈ: ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದ ಬ್ಯಾಟರ್ ಹಾಗೂ ತೀರಾ ಇತ್ತೀಚೆಗೆ ಭಾರತದ ಟ್ವೆಂಟಿ-20 ತಂಡದ ನಾಯಕರಾಗಿದ್ದ ಸೂರ್ಯ ಕುಮಾರ್ ಯಾದವ್ ಕಾಲುನೋವಿನ ಕಾರಣಕ್ಕೆ ಮುಂಬರುವ ಟ್ವೆಂಟಿ-20 ಸರಣಿಗೆ ಅಲಭ್ಯರಾಗಿದ್ದು ಇಡೀ ದೇಶೀಯ ಋತುವಿನಿಂದ ಹೊರಗುಳಿದಿದ್ದಾರೆ. ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಂದಲೂ ಹೊರಗುಳಿಯುವ ಎಲ್ಲ ಸಾಧ್ಯತೆಯಿದೆ.
ಸ್ಪೋರ್ಟ್ಸ್ ಹರ್ನಿಯಾದಿಂದ ಬಳಲುತ್ತಿರುವ ಯಾದವ್ ಜರ್ಮನಿಯಲ್ಲಿ ಶೀಘ್ರವೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ. ಸೂರ್ಯಕುಮಾರ್ಗೆ ಸ್ಪೋರ್ಟ್ಸ್ ಹರ್ನಿಯಾ ಇರುವುದು ಇತ್ತೀಚೆಗೆ ದೃಢಪಟ್ಟಿತು. ಪ್ರಸ್ತುತ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ಇನ್ನು ಎರಡು-ಮೂರು ದಿನಗಳಲ್ಲಿ ಅವರು ಜರ್ಮನಿಯ ಮ್ಯೂನಿಚ್ ಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈ ಋತುವಿನ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡುವುದಿಲ್ಲ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆರಂಭಿಕ ಕೆಲ ಪಂದ್ಯಗಳಲ್ಲಿ ಆಡುವುದು ಅನುಮಾನ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
2022ರಲ್ಲಿ ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಕೆ.ಎಲ್.ರಾಹುಲ್ ಸ್ಪೋರ್ಟ್ಸ್ ಹರ್ನಿಯಾಕ್ಕೆ ಒಳಗಾಗಿದ್ದು, ಅದೇ ವರ್ಷದ ಜುಲೈನಲ್ಲಿ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಗಾಯದ ಸಮಸ್ಯೆಯಿಂದಾಗಿ ಐಪಿಎಲ್ ನಂತರ ಹಲವು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್ ನಿಂದ ದೂರ ಉಳಿದಿದ್ದರು.
ಟ್ವೆಂಟಿ-20 ವಿಶ್ವಕಪ್ ಜೂನ್ನಲ್ಲಿ ನಡೆಯಲಿದೆ. ಸೂರ್ಯಗೆ ಸರಿಯಾಗಿ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ನೀಡಲಾಗುತ್ತದೆ. ಟಿ-20 ವಿಶ್ವಕಪ್ ನಲ್ಲಿ ಭಾರತದ ಯಶಸ್ಸಿಗೆ ಅವರು ಲಭ್ಯವಿರುವುದು ಅತ್ಯಂತ ನಿರ್ಣಾಯಕವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಅಂತಿಮ ಟಿ-20 ಪಂದ್ಯದ ವೇಳೆ ಸೂರ್ಯಕುಮಾರ್ ಗೆ ಕಾಲುನೋವು ಕಾಣಿಸಿಕೊಂಡಿತ್ತು.







