ನ್ಯಾಶನಲ್ ಗೇಮ್ಸ್ ಟೇಕ್ವಾಂಡೊ ಸ್ಪರ್ಧೆಯಲ್ಲಿನ ʼಮ್ಯಾಚ್ ಫಿಕ್ಸಿಂಗ್ʼ ಅನ್ನು ಭೇದಿಸಿದ IOA

ಸಾಂದರ್ಭಿಕ ಚಿತ್ರ (Photo credit: X)
ಡೆಹ್ರಾಡೂನ್: ಉತ್ತರಾಖಂಡದಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದ ಟೇಕ್ವಾಂಡೊ ಸ್ಪರ್ಧೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪಗಳ ಕುರಿತು ಭಾರತೀಯ ಒಲಿಂಪಿಕ್ ಸಮಿತಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಚಿನ್ನದ ಪದಕವನ್ನು 3 ಲಕ್ಷ ರೂ.ಗೆ, ಬೆಳ್ಳಿ ಪದಕವನ್ನು 2 ಲಕ್ಷ ರೂ.ಗೆ ಹಾಗೂ ಕಂಚಿನ ಪದಕವನ್ನು 1 ಲಕ್ಷ ರೂ.ಗೆ ಮಾರಿಕೊಳ್ಳಲಾಗಿದೆ ಎಂದು ವರದಿಗಳು ಆರೋಪಿಸಿದ್ದವು. ಇದರಿಂದ ಸ್ಪರ್ಧೆಯಲ್ಲಿನ ಸಮಗ್ರತೆ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿತ್ತು.
ಭಾರತೀಯ ಒಲಿಂಪಿಕ್ ಸಮಿತಿಯ ಪ್ರಕಟಣೆ ಪ್ರಕಾರ, ಸ್ಪರ್ಧೆ ಪ್ರಾರಂಭಗೊಳ್ಳುವುದಕ್ಕೂ ಮುನ್ನವೇ 16 ತೂಕದ ವಿಭಾಗಗಳ ಪೈಕಿ 10 ವಿಭಾಗಗಳಲ್ಲಿನ ವಿಜೇತರನ್ನು ಭಾರತೀಯ ಟೇಕ್ವಾಂಡೊ ಮಹಾ ಒಕ್ಕೂಟವು ಮುಂಚಿತವಾಗಿಯೇ ನಿರ್ಧರಿಸಿತ್ತು. ಈ ಸಂಬಂಧ ಟೇಕ್ವಾಂಡೊ ಸ್ಪರ್ಧೆಯ ನಿರ್ದೇಶಕ ಟಿ.ಪ್ರವೀಣ್ ಕುಮಾರ್ ಬದಲಿಗೆ ಎಸ್.ದಿನೇಶ್ ಕುಮಾರ್ ಅವರನ್ನು ಭಾರತೀಯ ಒಲಿಂಪಿಕ್ ಸಮಿತಿ ನೇಮಿಸಿದೆ ಹಾಗೂ ಶೇ. 50ರಷ್ಟು ತಾಂತ್ರಿಕ ಅಧಿಕಾರಿಗಳನ್ನು ವಜಾಗೊಳಿಸಲಾಗಿದ್ದು, ಪ್ರಮಾಣೀಕೃತ ರೆಫರಿಗಳನ್ನು ಅವರ ಜಾಗಕ್ಕೆ ನೇಮಿಸಲಾಗಿದೆ. ಇನ್ನು ಮುಂದೆ ಪಂದ್ಯಗಳ ವಿಡಿಯೊ ಚಿತ್ರೀಕರಣ ನಡೆಯಲಿದ್ದು, ಸ್ಪರ್ಧೆಯ ಮೇಲುಸ್ತುವಾರಿಯನ್ನು ಕ್ರೀಡಾ ತಾಂತ್ರಿಕ ನಡವಳಿಕೆ ಸಮಿತಿಯ ವಿಶೇಷ ಮೇಲ್ವಿಚಾರಣೆ ತಂಡವೊಂದು ನಡೆಸಲಿದೆ.
ಮ್ಯಾಚ್ ಫಿಕ್ಸಿಂಗ್ ಆರೋಪಗಳ ಕುರಿತು ಬೇಸರ ವ್ಯಕ್ತಪಡಿಸಿದ ಭಾರತೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷೆ ಪಿ.ಟಿ.ಉಷಾ, “ಸ್ಪರ್ಧೆ ಪ್ರಾರಂಭಗೊಳ್ಳುವುದಕ್ಕೂ ಮುನ್ನವೇ ಮೈದಾನದ ಹೊರಗೆ ರಾಷ್ಟ್ರೀಯ ಕ್ರೀಡಾಕೂಟದ ಪದಕಗಳನ್ನು ನಿರ್ಧರಿಸಲಾಗಿತ್ತು ಎಂಬ ಸಂಗತಿ ಆಘಾತಕಾರಿಯಾಗಿದೆ. ನಾವು ನಮ್ಮ ಕ್ರೀಡಾಪಟುಗಳನ್ನು ರಕ್ಷಿಸಲು ಹಾಗೂ ಎಲ್ಲ ಹಂತಗಳಲ್ಲೂ ನ್ಯಾಯಯುತ ಆಟ ನಡೆಯುವುದನ್ನು ಖಾತರಿಗೊಳಿಸಲು ಬದ್ಧವಾಗಿದ್ದೇವೆ” ಎಂದು ಹೇಳಿದ್ದಾರೆ.
ಕ್ರೀಡಾಕೂಟದ ವಿಶ್ವಾಸಾರ್ಹತೆಯನ್ನು ರಕ್ಷಿಸಲು PMC ಸಮಿತಿಯ ಶಿಫಾರಸುಗಳನ್ನು ಜಾರಿಗೊಳಸಬೇಕಾದ ಪ್ರಾಮುಖ್ಯತೆಯ ಕುರಿತು ಕ್ರೀಡಾ ತಾಂತ್ರಿಕ ನಡವಳಿಕೆ ಸಮಿತಿಯ ಅಧ್ಯಕ್ಷೆ ಸುನೈನಾ ಕುಮಾರಿ ಒತ್ತಿ ಹೇಳಿದ್ದಾರೆ.