ಐಪಿಎಲ್ 2025 | ಪ್ಲೇ-ಆಫ್, ಫೈನಲ್ ಪಂದ್ಯಗಳ ಸ್ಥಳ ಬದಲಾವಣೆ

PC : gujaratcricketassociation.com
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ಲೇ-ಆಫ್ ಮತ್ತು ಫೈನಲ್ ಪಂದ್ಯಗಳ ನೂತನ ಸ್ಥಳಗಳನ್ನು ಪ್ರಕಟಿಸಲಾಗಿದೆ. ಆರಂಭದಲ್ಲಿ, ಕೊನೆಯ ನಾಲ್ಕು ಪಂದ್ಯಗಳು ಹೈದರಾಬಾದ್ ಮತ್ತು ಕೋಲ್ಕತಗಳಲ್ಲಿ ನಡೆಯುವುದೆಂದು ನಿಗದಿಯಾಗಿತ್ತು.
ಆದರೆ, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಪಂದ್ಯಾವಳಿಯು ಒಂದು ವಾರ ಸ್ಥಗಿತಗೊಂಡ ಬಳಿಕ ಪರಿಸ್ಥಿತಿ ಬದಲಾಗಿದೆ. ಈಗ ಪ್ಲೇ-ಆಫ್ ಪಂದ್ಯಗಳು ಮುಲ್ಲನ್ಪುರ ಮತ್ತು ಅಹ್ಮದಾಬಾದ್ನಲ್ಲಿ ನಡೆಯಲು ನಿಗದಿಯಾಗಿವೆ.
"ರೋಚಕತೆ ಮತ್ತು ಮನರಂಜನೆ ತುಂಬಿದ 70 ಲೀಗ್ ಹಂತದ ಪಂದ್ಯಗಳ ಬಳಿಕ, ಬೆಳಕು ನವ ಚಂಡೀಗಢದ ನೂತನ ಪಿಸಿಎ ಸ್ಟೇಡಿಯಮ್ ನತ್ತ ಹರಿಯುತ್ತದೆ. ಅಲ್ಲಿ ಮೇ 29, ಗುರುವಾರ ಬಹುನಿರೀಕ್ಷಿತ ಒಂದನೇ ಕ್ವಾಲಿಫೈಯರ್ ಪಂದ್ಯ ನಡೆಯುತ್ತದೆ ಮತ್ತು ಮೇ 30 ಶುಕ್ರವಾರ ಎಲಿಮಿನೇಟರ್ ಪಂದ್ಯ ನಡೆಯುತ್ತದೆ’’ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಆಗಿರುವ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಎರಡನೇ ಕ್ವಾಲಿಫೈಯರ್ ಪಂದ್ಯವು ಜೂನ್ ಒಂದು ರವಿವಾರ ನಡೆದರೆ, ಅತಿ ನಿರೀಕ್ಷಿತ ಫೈನಲ್ ಪಂದ್ಯವು ಜೂನ್ 3 ಮಂಗಳವಾರ ನಡೆಯುತ್ತದೆ’’ ಎಂದು ಅದು ಹೇಳಿದೆ.
‘‘ಐಪಿಎಲ್ ಆಡಳಿತ ಮಂಡಳಿಯು ಹವಾಮಾನ ಪರಿಸ್ಥಿತಿ ಮತ್ತು ಇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ಲೇ-ಆಫ್ ಮತ್ತು ಫೈನಲ್ ಪಂದ್ಯಗಳ ನೂತನ ಸ್ಥಳಗಳನ್ನು ನಿರ್ಧರಿಸಿದೆ’’ ಎಂದಿದೆ.
► ಅರ್ಸಿಬಿ-ಹೈದರಾಬಾದ್ ಪಂದ್ಯ ಲಕ್ನೋಗೆ ಸ್ಥಳಾಂತರ
ಅದೇ ವೇಳೆ, ಮೇ 23ರಂದು ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಲೀಗ್ ಪಂದ್ಯವನ್ನು ಬೆಂಗಳೂರಿನಿಂದ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಮ್ಗೆ ಸ್ಥಳಾಂತರಿಸಲಾಗಿದೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.







