ಕೆಕೆಆರ್- ಡಿಸಿ ಪಂದ್ಯದ ಬಳಿಕ ಐಪಿಎಲ್ 2025 ಪ್ಲೇ-ಆಫ್ ಸಾಧ್ಯತೆಗಳು
ಅಂಕಪಟ್ಟಿಯ ಅಗ್ರ- 4ರಲ್ಲಿ ಸ್ಥಾನ ಪಡೆಯುವ ಯಾವ ತಂಡಗಳ ಅವಕಾಶಗಳು ಎಷ್ಟೆಷ್ಟು?

PC : PTI
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮಂಗಳವಾರ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿ ತನ್ನ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿಕೊಂಡಿತು. ಹಾಲಿ ಐಪಿಎಲ್ ಋತುವಿನಲ್ಲಿ ಸ್ಥಿರ ಪ್ರದರ್ಶನಗಳನ್ನು ನೀಡುತ್ತಿರುವ ತಂಡಗಳಲ್ಲಿ ಒಂದಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೆಯ ಐದು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದೆ.
ಡೆಲ್ಲಿ ಕ್ಯಾಪಿಟಲ್ಸ್ನ ಸೋಲು ಯಾವ ನಾಲ್ಕು ತಂಡಗಳು ಪ್ಲೇಆಫ್ ಗೆ ಅರ್ಹತೆ ಪಡೆಯಬಹುದು ಎನ್ನುವುದಕ್ಕೆ ಸಂಬಂಧಿಸಿ ಹಲವಾರು ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದೆ. ಒಂದು ವೇಳೆ ಈ ಫಲಿತಾಂಶವು ಭಿನ್ನವಾಗಿದ್ದರೆ, ಅಂಕಪಟ್ಟಿಯಲ್ಲಿ ಕೆಳಾರ್ಧದಲ್ಲಿರುವ ತಂಡಗಳಿಗೆ ಸಾಕಷ್ಟು ಹಿನ್ನಡೆಯಾಗುತ್ತಿತ್ತು.
►ತಂಡಗಳು ಪ್ಲೇಆಫ್ ಗೆ ತೇರ್ಗಡೆಗೊಳ್ಳುವ ಸಾಧ್ಯತೆಗಳೆಷ್ಟು?
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ): ರಜತ್ ಪಾಟೀದಾರ್ ನೇತೃತ್ವದ ತಂಡವು ಈಗಾಗಲೇ 10 ಪಂದ್ಯಗಳಿಂದ 7 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ. ಪ್ಲೇಆಫ್ ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವುದಕ್ಕೆ ಅದು ಹತ್ತಿರದಲ್ಲಿದೆ. ಆದರೆ, ಅದರ ನಿಜವಾದ ಗುರಿ ಇರುವುದು ಅಗ್ರ 2ರಲ್ಲಿ ಸ್ಥಾನ ಪಡೆಯುವುದು. ಆಗ ಫೈನಲ್ ಗೆ ತಲುಪಲು ಎರಡು ಅವಕಾಶಗಳು ಅದಕ್ಕೆ ಲಭಿಸುತ್ತವೆ. ಅದಕ್ಕೆ ಇನ್ನು 4 ಪಂದ್ಯಗಳು ಇದ್ದು, ಅಗ್ರ 4ರಲ್ಲಿ ಸ್ಥಾನ ಪಡೆಯಲು ಅದು ಎರಡರಲ್ಲಿ ಗೆದ್ದರೆ ಸಾಕಾಗುತ್ತದೆ.
ಮುಂಬೈ ಇಂಡಿಯನ್ಸ್ (ಎಮ್ಐ): ಹತ್ತು ಪಂದ್ಯಗಳಿಂದ ಆರು ಜಯಗಳನ್ನು ಸಂಪಾದಿಸಿರುವ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿರುವುದು ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡದ ಹೆಗ್ಗಳಿಕೆಯಾಗಿದೆ. ಉಳಿದ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದರೆ ಅದಕ್ಕೆ ಅಗ್ರ 4ರಲ್ಲಿ ಸ್ಥಾನ ಖಚಿತ. ಆದರೆ ಎರಡು ವಿಜಯಗಳೂ ಸಾಕಾಗಬಹುದು.
ಗುಜರಾತ್ ಟೈಟಾನ್ಸ್ (ಜಿಟಿ): ಒಂಭತ್ತು ಪಂದ್ಯಗಳಿಂದ 6 ವಿಜಯಗಳನ್ನು ಗಳಿಸಿರುವ ಗುಜರಾತ್ ಟೈಟಾನ್ಸ್ ಪ್ರಸಕ್ತ ಐಪಿಎಲ್ ಋತುವಿನ ಅತ್ಯಂತ ಸ್ಥಿರ ಮತ್ತು ಫಾರ್ಮ್ನಲ್ಲಿರುವ ತಂಡಗಳ ಪೈಕಿ ಒಂದಾಗಿದೆ. ಶುಭಮನ್ ಗಿಲ್ ನೇತೃತ್ವದ ತಂಡವು ಇನ್ನು ಐದು ಪಂದ್ಯಗಳನ್ನು ಆಡಬೇಕಾಗಿದ್ದು, ಅಗ್ರ 4ರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅದು ಕನಿಷ್ಠ 2 ಪಂದ್ಯಗಳನ್ನು ಗೆಲ್ಲಬೇಕಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ): ಕಳೆದ ಆರು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಕಷ್ಟದ ಸ್ಥಿತಿಯಲ್ಲಿದೆ. ಆದಾಗ್ಯೂ, ಪಂದ್ಯಾವಳಿಯ ಆರಂಭದಲ್ಲಿ ಅಕ್ಷರ್ ಪಟೇಲ್ ನೇತೃತ್ವದ ತಂಡವು ನೀಡಿರುವ ಉತ್ತಮ ಪ್ರದರ್ಶನದಿಂದಾಗಿ ಅದು ಈಗಲೂ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅಗ್ರ 4ರ ಸ್ಥಾನ ಮುಂದುವರಿಯಲು ಅದಕ್ಕೆ ಉಳಿದಿರುವ ನಾಲ್ಕು ಪಂದ್ಯಗಳಿಂದ ಕನಿಷ್ಠ 2 ವಿಜಯಗಳ ಅಗತ್ಯವಿದೆ.
ಪಂಜಾಬ್ ಕಿಂಗ್ಸ್ (ಪಿಬಿಕೆಎಸ್): ಒಂಭತ್ತು ಪಂದ್ಯಗಳಿಂದ ಐದು ವಿಜಯಗಳನ್ನು ಸಂಪಾದಿಸಿರುವ ಪಂಜಾಬ್ ಕಿಂಗ್ಸ್ ಈ ಪಂದ್ಯಾವಳಿಯಲ್ಲಿ ಏಳು-ಬೀಳಿನ ಅಭಿಯಾನವನ್ನು ನಡೆಸುತ್ತಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವೊಂದು ಮಳೆಯಿಂದಾಗಿ ರದ್ದಾಗಿರುವ ಹಿನ್ನೆಲೆಯಲ್ಲಿ 11 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಖಚಿತಪಡಿಸಲು ಅದು ಉಳಿದ 5 ಪಂದ್ಯಗಳಿಂದ ಕನಿಷ್ಠ ಮೂರು ವಿಜಯಗಳನ್ನು ಸಂಪಾದಿಸಬೇಕಾಗಿದೆ. ಅಂತಿಮವಾಗಿ ಎರಡು ವಿಜಯಗಳೂ ಸಾಕಾಗಬಹುದು.
ಲಕ್ನೋ ಸೂಪರ್ ಜಯಂಟ್ಸ್ (ಎಲ್ಎಸ್ಜಿ): ರಿಶಭ್ ಪಂತ್ ರನ್ನು ಅತ್ಯಧಿಕ ಬೆಲೆಗೆ ಖರೀದಿಸಿದರೂ, ತಾನು ಬಯಸಿದ ಫಲಿತಾಂಶವನ್ನು ಪಡೆಯಲು ಲಕ್ನೋ ಸೂಪರ್ ಜಯಂಟ್ಸ್ಗೆ ಸಾಧ್ಯವಾಗಿಲ್ಲ. ಆದರೆ, ತಂಡಕ್ಕೆ ಅಗ್ರ 4ರಲ್ಲಿ ಸ್ಥಾನ ಪಡೆಯುವ ಪ್ರಾಯೋಗಿಕ ಅವಕಾಶ ಈಗಲೂ ಇದೆ. ಅದು ಉಳಿದ 4 ಪಂದ್ಯಗಳಿಂದ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಬೇಕು.
ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್): ಕೋಲ್ಕತಾ ನೈಟ್ ರೈಡರ್ಸ್ ಗೆ ಈವರೆಗೆ 10 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವೊಂದು ಮಳೆಯಿಂದಾಗಿ ರದ್ದಾಗಿರುವ ಹಿನ್ನೆಲೆಯಲ್ಲಿ ಅದು 9 ಅಂಕಗಳನ್ನು ಹೊಂದಿದೆ. ಅಜಿಂಕ್ಯ ರಹಾನೆ ನೇತೃತ್ವದ ತಂಡವು ಇನ್ನು ನಾಲ್ಕು ಪಂದ್ಯಗಳನ್ನು ಆಡಬೇಕಾಗಿದ್ದು, ಅಂಕಪಟ್ಟಿಯ ಅಗ್ರ 4ರಲ್ಲಿ ಸ್ಥಾನ ಪಡೆಯಬೇಕಾದರೆ, ಆ ಪೈಕಿ ಕನಿಷ್ಠ ಮೂರು ಪಂದ್ಯಗಳನ್ನು ಗೆಲ್ಲುವುದು ಅದಕ್ಕೆ ಅನಿವಾರ್ಯವಾಗಿದೆ.
ರಾಜಸ್ಥಾನ ರಾಯಲ್ಸ್ (ಆರ್ಆರ್): ರಾಜಸ್ಥಾನ ರಾಯಲ್ಸ್ಗೆ ಈವರೆಗೆ 10 ಪಂದ್ಯಗಳಿಂದ ಕೇವಲ ಮೂರರಲ್ಲಿ ಗೆಲ್ಲಲು ಸಾಧ್ಯವಾಗಿದೆ. ಅದು ಈಗ 6 ಅಂಕಗಳನ್ನು ಹೊಂದಿದೆ. ಇನ್ನುಳಿದ ಎಲ್ಲಾ 4 ಪಂದ್ಯಗಳನ್ನು ಅದು ಗೆದ್ದರೆ ಅದರ ಅಂಕ 14 ಆಗುತ್ತದೆ. ಆದರೆ ಅದರ ಪ್ಲೇಆಫ್ ಅರ್ಹತೆಯು ಪಟ್ಟಿಯಲ್ಲಿ ಅದಕ್ಕಿಂತ ಮೇಲಿರುವ ತಂಡಗಳ ಸೋಲುಗಳನ್ನೂ ಅವಲಂಬಿಸಿದೆ.
ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್):ಹಾಲಿ ಐಪಿಎಲ್ ಋತುವಿನ ಆರಂಭದಲ್ಲಿ, ಸನ್ರೈಸರ್ಸ್ ಹೈದರಬಾದ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಪೈಕಿ ಒಂದಾಗಿತ್ತು. ಆದರೆ, ಆ ನಿರೀಕ್ಷೆಯನ್ನು ಉಳಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ. ಅದು 9 ಪಂದ್ಯಗಳನ್ನು ಆಡಿ ಮೂರರಲ್ಲಿ ಗೆದ್ದಿದೆ. ಇನ್ನು ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಐದು ಪಂದ್ಯಗಳನ್ನು ಆಡಬೇಕಾಗಿದೆ. ಪ್ಲೇಆಫ್ ಗೆ ಅರ್ಹತೆಯನ್ನು ಪಡೆಯಬೇಕಾದರೆ ಈ ಎಲ್ಲಾ ಪಂದ್ಯಗಳನ್ನು ಅದು ಗೆಲ್ಲುವುದು ಅಗತ್ಯವಾಗಿದೆ. ಒಂದೇ ಒಂದು ಪಂದ್ಯವನ್ನು ಸೋತರೂ ಅದರ ಅಭಿಯಾನ ಮುಕ್ತಾಯಗೊಳ್ಳಲಿದೆ.
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ): ಹಾಲಿ ಇಂಡಿಯನ್ ಪ್ರೀಮಿಯರ್ ಲೀಗ್ ಋತುವಿನಲ್ಲಿ, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ಲೇಆಫ್ ಗೆ ತೇರ್ಗಡೆಗೊಳ್ಳುವ ಎಲ್ಲಾ ಪ್ರಾಯೋಗಿಕ ಅವಕಾಶಗಳು ಮುಚ್ಚಿಹೋಗಿವೆ. ಅದು ಈವರೆಗೆ 9 ಪಂದ್ಯಗಳಿಂದ ಕೇವಲ 2 ಜಯಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅದು ಇನ್ನುಳಿದಿರುವ ಎಲ್ಲಾ ಐದು ಪಂದ್ಯಗಳನ್ನು ಗೆದ್ದರೂ, ಅದಕ್ಕೆ 14 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯವಾಗುತ್ತದೆ. ಮೈನಸ್ 1.302 ನೆಟ್ ರನ್ರೇಟ್ ಹೊಂದಿರುವ ತಂಡಕ್ಕೆ ಅಗ್ರ 4ರಲ್ಲಿ ಸ್ಥಾನ ಪಡೆಯಲು ಇದು ಸಾಕಾಗುವ ಸಾಧ್ಯತೆಯಿಲ್ಲ. ಆದಾಗ್ಯೂ, ದೂರದ ಅವಕಾಶವೊಂದು ಇದೆ.







