ಐಪಿಎಲ್ 2026: ಜಾಕ್ ಪಾಟ್ ನಿರೀಕ್ಷೆಯಲ್ಲಿ ಭಾರತದ ಐವರು ಯುವ ಕ್ರಿಕೆಟಿಗರು

Photo Credit : iplt20.com
ಹೊಸದಿಲ್ಲಿ, ಡಿ.10: ಐಪಿಎಲ್-2026ರ ಮಿನಿ ಹರಾಜು ಕಾರ್ಯಕ್ರಮ ಡಿ.16ರಂದು ಅಬುಧಾಬಿಯಲ್ಲಿ ನಡೆಯಲಿದ್ದು, ಭಾರತದ ಹಲವು ಹೊಸ ಕ್ರಿಕೆಟಿಗರು ಎಲ್ಲರ ಗಮನ ಸೆಳೆಯಲಾರಂಭಿಸಿದ್ದಾರೆ.
ಮಿನಿ ಹರಾಜು ಕೋಟ್ಯಧೀಶರನ್ನು ಸೃಷ್ಟಿಸಲಿದೆ. ಮಿನಿ ಹರಾಜಿಗಿಂತ ಮೊದಲು 2025-26ರ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ(ಎಸ್ಎಂಎಟಿ)ಕ್ರಿಕೆಟ್ ಟೂರ್ನಿಯು ನಡೆದಿದ್ದು, ದೇಶೀಯ ಕ್ರಿಕೆಟಿಗರಿಗೆ ಐಪಿಎಲ್ ಫ್ರಾಂಚೈಸಿಗಳ ಮೇಲೆ ಪ್ರಭಾವಬೀರಲು ಇದು ಸರಿಯಾದ ವೇದಿಕೆಯಾಗಿದೆ. ಎಸ್ಎಂಎಟಿಯಲ್ಲಿನ ಪ್ರದರ್ಶನವನ್ನು ಆಧರಿಸಿ ಐವರು ಯುವ ಅಟಗಾರರು ಹರಾಜಿನಲ್ಲಿ ಭಾರೀ ಬಿಡ್ ಆಕರ್ಷಿಸುವ ಭರವಸೆ ಮೂಡಿಸಿದ್ದಾರೆ.
► ಆಕಿಬ್ ನಬಿ(ಜಮ್ಮು-ಕಾಶ್ಮೀರ):
ಜಮ್ಮು-ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿ ದೇಶೀಯ ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ ಆಟಗಾರನ ಪೈಕಿ ಒಬ್ಬರಾಗಿದ್ದಾರೆ. 29ರ ವಯಸ್ಸಿನ ನಬಿ ಎಲೈಟ್ ‘ಬಿ’ ಗುಂಪಿನಲ್ಲಿ 7.41ರ ಎಕಾನಮಿ ರೇಟ್ನಲ್ಲಿ ಏಳು ಪಂದ್ಯಗಳಲ್ಲಿ ಒಟ್ಟು 15 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯದಿಂದ ಹೆಸರುವಾಸಿಯಾಗಿರುವ ನಬಿ ಅವರನ್ನು ಹಲವು ಐಪಿಎಲ್ ಫ್ರಾಂಚೈಸಿಗಳು ಟ್ರಯಲ್ಸ್ಗಾಗಿ ಬುಲಾವ್ ನೀಡಿವೆ. ಗುಣಮಟ್ಟದ ಭಾರತೀಯ ವೇಗಿಗಳ ಹುಡುಕಾಟದಲ್ಲಿರುವ ಫ್ರಾಂಚೈಸಿಗಳನ್ನು ನಬಿ ಆಕರ್ಷಿಸಬಹುದು.
► ಕಾರ್ತಿಕ್ ಶರ್ಮಾ(ರಾಜಸ್ಥಾನ):
ರಾಜಸ್ಥಾನ ತಂಡ ಈ ವರ್ಷದ ಎಸ್ಎಂಎಟಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ‘ಡಿ’ ಗುಂಪಿನಲ್ಲಿ ಪ್ರಮುಖ ದೇಶೀಯ ತಂಡಗಳಾದ ದಿಲ್ಲಿ, ತಮಿಳುನಾಡು ಹಾಗೂ ಕರ್ನಾಟಕವನ್ನು ಹಿಂದಿಕ್ಕಿ ನಾಕೌಟ್ ಗೆ ತೇರ್ಗಡೆಯಾಗಿದೆ. 19ರ ವಯಸ್ಸಿನ ಕಾರ್ತಿಕ್ ಶರ್ಮಾ ಅವರು ರಾಜಸ್ಥಾನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮಧ್ಯಮ ಸರದಿಯಲ್ಲಿ ಪ್ರಮುಖ ಕೊಡುಗೆ ನೀಡಿರುವ ಕಾರ್ತಿಕ್ ಐದು ಪಂದ್ಯಗಳಲ್ಲಿ 160ಕ್ಕೂ ಅಧಿಕ ಸ್ಟ್ರೈಕ್ರೇಟ್ ನಲ್ಲಿ ಒಟ್ಟು 133 ರನ್ ಗಳಿಸಿದ್ದಾರೆ. ವಿಕೆಟ್ಕೀಪಿಂಗ್ ಹಾಗೂ ಪಂದ್ಯಕ್ಕೆ ಅಂತ್ಯ ಹಾಡುವ ಶರ್ಮಾ ಅವರ ಸಾಮರ್ಥ್ಯವು ಐಪಿಎಲ್ ತಂಡಗಳಿಗೆ ಪ್ರಯೋಜನಕಾರಿಯಾಗಬಹುದು.
► ತುಷಾರ್ ರಹೇಜಾ(ತಮಿಳುನಾಡು): ತಮಿಳುನಾಡಿನ ತುಷಾರ್ ರಹೇಜಾ ಕೂಡ ಎಲ್ಲರ ಗಮನ ಸೆಳೆಯುತ್ತಿರುವ ಇನ್ನೋರ್ವ ಹೊಸ ವಿಕೆಟ್ಕೀಪರ್-ಬ್ಯಾಟರ್ ಆಗಿದ್ದಾರೆ. ಈ ವರ್ಷದ ಎಸ್ಎಂಎಟಿಯಲ್ಲಿ ಇನಿಂಗ್ಸ್ ಅರಂಭಿಸಿರುವ ಎಡಗೈ ಬ್ಯಾಟರ್ ಏಳು ಪಂದ್ಯಗಳಲ್ಲಿ 164ರ ಸ್ಟ್ರೈಕ್ರೇಟ್ ನಲ್ಲಿ 151 ರನ್ ಗಳಿಸಿದ್ದಾರೆ. 2025ರ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲೂ ಮಿಂಚಿದ್ದು, 185ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ ಪಂದ್ಯಾವಳಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದ್ದರು. ಈ ವರ್ಷ ಸ್ಫೋಟಕ ಶೈಲಿಯ ಭಾರತೀಯ ವಿಕೆಟ್ಕೀಪರ್ಗಳ ಕೊರತೆ ಇರುವ ಕಾರಣ ರಹೇಜಾ ಹಲವು ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ.
► ಅನ್ಮೋಲ್ಪ್ರೀತ್ ಸಿಂಗ್(ಪಂಜಾಬ್):
27ರ ವಯಸ್ಸಿನ ಅನ್ಮೋಲ್ ಪ್ರೀತ್ ಸಿಂಗ್ ಪಂಜಾಬ್ ಪರ ದೇಶೀಯ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಅವರು ಸಹ ಆಟಗಾರರಾದ ಅಭಿಷೇಕ್ ಶರ್ಮಾ, ಪ್ರಭ್ಸಿಮ್ರನ್ ಸಿಂಗ್, ನೇಹಾಲ್ ವಧೇರ ಅಥವಾ ರಮನ್ದೀಪ್ ಸಿಂಗ್ ಅವರಷ್ಟು ಪ್ರಚಾರ ಪಡೆಯಲಿಲ್ಲ. ಅನ್ಮೋಲ್ಪ್ರೀತ್ ಏಳು ಪಂದ್ಯಗಳಲ್ಲಿ 172ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 241 ರನ್ ಗಳಿಸಿದ್ದಾರೆ. ಪಂಜಾಬ್ನ ರನ್ ಸ್ಕೋರರ್ಗಳ ಪೈಕಿ ವಿಶ್ವದ ನಂ.1 ಬ್ಯಾಟರ್ ಅಭಿಷೇಕ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಈ ಹಿಂದೆ ಐಪಿಎಲ್ನಲ್ಲಿ ಎಸ್ಆರ್ಎಚ್ ಹಾಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳ ಪರ ಸ್ವಲ್ಪ ಸಮಯ ಆಡಿದ್ದರು. 2026ರ ಐಪಿಎಲ್ ಹರಾಜಿಗೆ ಭರ್ಜರಿ ಫಾರ್ಮ್ನಲ್ಲಿರುವ ಹೊಸ ಭಾರತೀಯ ಬ್ಯಾಟರ್ ಆಗಿ ಪ್ರವೇಶ ಪಡೆಯಲಿದ್ದಾರೆ.
► ಅಶೋಕ್ ಶರ್ಮಾ(ರಾಜಸ್ಥಾನ): ರಾಜಸ್ಥಾನದ 23ರ ವಯಸ್ಸಿನ ವೇಗದ ಬೌಲರ್ ಅಶೋಕ್ ಶರ್ಮಾ 2025-26ರ ಸಾಲಿನ ಎಸ್ಎಂಎಟಿಯ ಲೀಗ್ ಹಂತದಲ್ಲಿ ಏಳು ಪಂದ್ಯಗಳಲ್ಲಿ 19 ವಿಕೆಟ್ಗಳನ್ನು ಉರುಳಿಸಿ ಗರಿಷ್ಠ ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಅಶೋಕ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಅಶೋಕ್ ಈ ಹಿಂದೆ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಿಗೆ ಆಯ್ಕೆಯಾಗಿದ್ದರು. ಈ ಬಾರಿ ಮತ್ತೊಮ್ಮೆ ಫ್ರಾಂಚೈಸಿಯೊಂದಿಗೆ ಸಹಿ ಹಾಕುವ ಹೆಚ್ಚಿನ ಅವಕಾಶ ಹೊಂದಿದ್ದಾರೆ.







