IPL 2026 | ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್; CSK ವಿರುದ್ಧ ರಾಜಸ್ಥಾನಕ್ಕೆ ಸುಲಭ ಜಯ

Photo Credit : PTI
ಗುವಾಹಟಿ, ಮಾ.31: ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರದ ಬ್ಯಾಟಿಂಗ್ (52 ರನ್, 17 ಎಸೆತ, 4 ಬೌಂಡರಿ, 5 ಸಿಕ್ಸರ್) ನೆರವಿನಿಂದ 2026ರ ಐಪಿಎಲ್ ಟಿ-20 ಟೂರ್ನಿಯ ಮೂರನೇ ಲೀಗ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್ ಗಳ ಅಂತರದಿಂದ ಸುಲಭವಾಗಿ ಮಣಿಸಿ ಶುಭಾರಂಭ ಮಾಡಿತು.
ಸೋಮವಾರ ಟಾಸ್ ಜಯಿಸಿದ ರಾಜಸ್ಥಾನ ತಂಡದ ನಾಯಕ ರಿಯಾನ್ ಪರಾಗ್ ಮೊದಲು ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿದ ರಾಜಸ್ಥಾನ ಬೌಲರ್ ಗಳು ಶಿಸ್ತುಬದ್ಧ ದಾಳಿಯಿಂದ ಸಿಎಸ್ಕೆ ತಂಡವನ್ನು 19.4 ಓವರ್ಗಳಲ್ಲಿ ಕೇವಲ 127 ರನ್ ಗೆ ನಿಯಂತ್ರಿಸಿದರು.
ಗೆಲ್ಲಲು ಸುಲಭ ಗುರಿ ಪಡೆದ ರಾಜಸ್ಥಾನ ತಂಡವು 12.1 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 128 ರನ್ ಗಳಿಸಿತು. ಇನ್ನೂ 47 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು.
ರಾಜಸ್ಥಾನದ ಇನಿಂಗ್ಸ್ ಆರಂಭಿಸಿದ ವೈಭವ್ ಹಾಗೂ ಯಶಸ್ವಿ ಜೈಸ್ವಾಲ್ (ಔಟಾಗದೆ 38 ರನ್, 36 ಎಸೆತ) 6.2 ಓವರ್ಗಳಲ್ಲಿ 75 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿದರು. ವೈಭವ್ ಕೇವಲ 15 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. ಕಾಂಬೋಜ್ ಅವರು ವೈಭವ್ ಇನಿಂಗ್ಸ್ಗೆ ತೆರೆ ಎಳೆದರು.
ಯಶಸ್ವಿ ಜೈಸ್ವಾಲ್ 2023ರಲ್ಲಿ ಕೆಕೆಆರ್ ವಿರುದ್ಧ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಇದು ರಾಜಸ್ಥಾನದ ಪರ ವೇಗದ ಅರ್ಧಶತಕವಾಗಿದೆ. ವೈಭವ್ ಕಳೆದ ವರ್ಷ ಜೈಪುರದಲ್ಲಿ ಗುಜರಾತ್ ವಿರುದ್ಧ 17 ಎಸೆತಗಳಲ್ಲಿ 50 ರನ್ ಸಿಡಿಸಿದ್ದರು.
ಇದಕ್ಕೂ ಮೊದಲು 5.3 ಓವರ್ಗಳಲ್ಲಿ 38 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡ ಸಿಎಸ್ಕೆ ಕಳಪೆ ಆರಂಭ ಪಡೆದಿತು.
ವಿಕೆಟ್ಕೀಪರ್ ಸಂಜು ಸ್ಯಾಮ್ಸನ್ (6 ರನ್), ನಾಯಕ ಋತುರಾಜ್ ಗಾಯಕ್ವಾಡ್ (6 ರನ್), ಆಯುಷ್ ಮ್ಹಾತ್ರೆ (0) ಹಾಗೂ ಮ್ಯಾಥ್ಯೂ ಶಾರ್ಟ್ (2 ರನ್) ಅವರು ವೇಗಿಗಳಾದ ನಾಂಡ್ರೆ ಬರ್ಗೆರ್ (2-18) ಹಾಗೂ ಜೋಫ್ರಾ ಆರ್ಚರ್ (2-19) ದಾಳಿಗೆ ತತ್ತರಿಸಿದರು.
ಸರ್ಫರಾಝ್ ಖಾನ್ (18 ರನ್, 15 ಎಸೆತ) ಹಾಗೂ ಶಿವಂ ದುಬೆ (6 ರನ್) ವಿಕೆಟ್ಗಳನ್ನು ಉರುಳಿಸಿದ ರವೀಂದ್ರ ಜಡೇಜ (2-18) ಸಿಎಸ್ಕೆ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದರು.
ಹೊಸ ಮುಖ ಕಾರ್ತಿಕ್ ಶರ್ಮಾ (18 ರನ್, 15 ಎಸೆತ) ಹಾಗೂ ಬೌಲರ್ ನೂರ್ ಅಹ್ಮದ್ (1) ಬೇಗನೆ ಔಟಾದರು.
ಸಿಎಸ್ಕೆ ಪರ ಆಲ್ ರೌಂಡರ್ ಜೇಮಿ ಓವರ್ಟನ್ (43 ರನ್, 36 ಎಸೆತ, 2 ಬೌಂಡರಿ, 2 ಸಿಕ್ಸರ್) ಸರ್ವಾಧಿಕ ಸ್ಕೋರ್ ಗಳಿಸಿದರು. 19.4ನೇ ಓವರ್ನಲ್ಲಿ ರನೌಟಾದ ಅವರಿಗೆ ಮತ್ತೊಂದು ತುದಿಯಿಂದ ಉತ್ತಮ ಸಾಥ್ ಸಿಗಲಿಲ್ಲ.
ರಾಜಸ್ಥಾನದ ಪರವಾಗಿ ಜೋಫ್ರಾ ಆರ್ಚರ್ (2-19), ರವೀಂದ್ರ ಜಡೇಜ (2-18) ಹಾಗೂ ನಾಂಡ್ರೆ ಬರ್ಗೆರ್ (2-26) ತಲಾ ಎರಡು ವಿಕೆಟ್ಗಳನ್ನು ಕಬಳಿಸಿದರು.
ಬ್ರಿಜೇಶ್ ಶರ್ಮಾ (1-17), ರವಿ ಬಿಷ್ಣೋಯಿ (1-16) ಹಾಗೂ ಸಂದೀಪ್ ಶರ್ಮಾ (1-22) ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಚೆನ್ನೈ ಸೂಪರ್ ಕಿಂಗ್ಸ್: 19.4 ಓವರ್ಗಳಲ್ಲಿ 127 ರನ್ಗೆ ಆಲೌಟ್
(ಜೇಮಿ ಓವರ್ಟನ್ 43, ಕಾರ್ತಿಕ್ ಶರ್ಮಾ 18, ಸರ್ಫರಾಝ್ ಖಾನ್ 17, ಆರ್ಚರ್ 2-19, ರವೀಂದ್ರ ಜಡೇಜ 2-18, ಬರ್ಗೆರ್ 2-26)
ರಾಜಸ್ಥಾನ ರಾಯಲ್ಸ್: 12.1 ಓವರ್ಗಳಲ್ಲಿ 128/2
(ವೈಭವ್ ಸೂರ್ಯವಂಶಿ 52, ಯಶಸ್ವಿ ಜೈಸ್ವಾಲ್ ಔಟಾಗದೆ 38, ಅಂಶುಲ್ ಕಾಂಬೋಜ್ 2-27







