IPL 2026 | ಹೈದರಾಬಾದ್ ವಿರುದ್ಧ ಲಕ್ನೋಗೆ 5 ವಿಕೆಟ್ಗಳ ಜಯ

Photo Credit : X
ಹೈದರಾಬಾದ್, ಎ.5: ನಾಯಕ ರಿಷಭ್ ಪಂತ್(ಔಟಾಗದೆ 68, 50 ಎಸೆತ, 9 ಬೌಂಡರಿ)ತಾಳ್ಮೆಯ ಬ್ಯಾಟಿಂಗ್ ಹಾಗೂ ಮುಹಮ್ಮದ್ ಶಮಿ ನೇತೃತ್ವದ ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ಬಲದಿಂದ ಲಕ್ನೊ ಸೂಪರ್ ಜಯಂಟ್ಸ್ ತಂಡವು ಆತಿಥೇಯ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಐದು ವಿಕೆಟ್ಗಳ ಅಂತರದಿಂದ ರೋಚಕವಾಗಿ ಮಣಿಸಿತು. ಈ ಮೂಲಕ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು.
ರವಿವಾರ ನಡೆದ 10ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 157 ರನ್ ಗುರಿ ಪಡೆದ ಲಕ್ನೊ ತಂಡವು 19.5 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 160 ರನ್ ಗಳಿಸಿತು. ಅಜೇಯವಾಗುಳಿದ ನಾಯಕ ಪಂತ್ ಇನ್ನೂ ಒಂದು ಎಸೆತ ಬಾಕಿ ಇರುವಾಗ ಲಕ್ನೊಗೆ ಗೆಲುವು ತಂದುಕೊಟ್ಟರು.
ಲಕ್ನೊ ತಂಡದ ಇನಿಂಗ್ಸ್ ಆರಂಭಿಸಿದ ಮಿಚೆಲ್ ಮಾರ್ಷ್(14 ರನ್, 12 ಎಸೆತ)ಹಾಗೂ ಏಡೆನ್ ಮರ್ಕ್ರಮ್(45 ರನ್, 27 ಎಸೆತ, 6 ಬೌಂಡರಿ, 2 ಸಿಕ್ಸರ್)4.4 ಓವರ್ಗಳಲ್ಲಿ 37 ರನ್ ಸೇರಿಸಿ ಸಾಧಾರಣ ಆರಂಭ ಒದಗಿಸಿದರು. ಮಾರ್ಷ್ ಔಟಾದ ನಂತರ ಮರ್ಕ್ರಮ್ ಹಾಗೂ ಪಂತ್ ಎರಡನೇ ವಿಕೆಟ್ಗೆ 40 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಮರ್ಕ್ರಮ್, ಆಯುಷ್ ಬದೋನಿ(12 ರನ್), ನಿಕೊಲಸ್ ಪೂರನ್(1 ರನ್)ಪೆವಿಲಿಯನ್ಗೆ ಪರೇಡ್ ನಡೆಸಿದರು. ಅಬ್ದುಲ್ ಸಮದ್(16 ರನ್, 12 ಎಸೆತ)ಹಾಗೂ ಪಂತ್ ಐದನೇ ವಿಕೆಟ್ಗೆ 34 ರನ್ ಸೇರಿಸಿ ಬ್ಯಾಟಿಂಗ್ ಕುಸಿತಕ್ಕೆ ತಡೆಯೊಡ್ಡಿದರು. ಔಟಾಗದೆ 68 ರನ್ ಗಳಿಸಿದ ಪಂತ್ ಲಕ್ನೊಕ್ಕೆ ಕೊನೆಯ ಓವರ್ನಲ್ಲಿ ಗೆಲುವು ತಂದುಕೊಟ್ಟರು.
ಹೈದರಾಬಾದ್ 156/9: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಸನ್ರೈಸರ್ಸ್ ಹೈದರಾಬಾದ್ ತಂಡವು ಹೆನ್ರಿಕ್ ಕ್ಲಾಸೆನ್(62 ರನ್, 41 ಎಸೆತ, 5 ಬೌಂಡರಿ,2 ಸಿಕ್ಸರ್)ಹಾಗೂ ನಿತೀಶ್ ಕುಮಾರ ರೆಡ್ಡಿ(56 ರನ್, 33 ಎಸೆತ, 3 ಬೌಂಡರಿ,5 ಸಿಕ್ಸರ್)ಅರ್ಧಶತಕದ ಕೊಡುಗೆಯ ಹೊರತಾಗಿಯೂ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 156 ರನ್ ಗಳಿಸಲಷ್ಟೇ ಶಕ್ತವಾಯಿತು.
ಹೈದರಾಬಾದ್ ತಂಡವು 2.1 ಓವರ್ಗಳಲ್ಲಿ ಆರಂಭಿಕ ಆಟಗಾರರಾದ ಅಭಿಷೇಕ್ ಶರ್ಮಾ(0)ಹಾಗೂ ಟ್ರಾವಿಸ್ ಹೆಡ್(7 ರನ್)ವಿಕೆಟ್ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಈ ಎರಡು ಪ್ರಮುಖ ವಿಕೆಟ್ಗಳು ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ಪಾಲಾದವು. ನಾಯಕ ಇಶಾನ್ ಕಿಶನ್(1 ರನ್)ಪ್ರಿನ್ಸ್ ಯಾದವ್ಗೆ ಕ್ಲೀನ್ಬೌಲ್ಡಾದರು.
ಲಿವಿಂಗ್ಸ್ಟೋನ್(14 ರನ್, 20 ಎಸೆತ)ದಿಗ್ವೇಶ್ ರಾಥಿ(1-46)ಅವರಿಗೆ ವಿಕೆಟ್ ಒಪ್ಪಿಸಿದಾಗ ಹೈದರಾಬಾದ್ 7.1 ಓವರ್ಗಳಲ್ಲಿ 26 ರನ್ಗೆ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು.
ಐದನೇ ವಿಕೆಟ್ಗೆ 116 ರನ್ ಜೊತೆಯಾಟ ನಡೆಸಿದ ಹೆನ್ರಿಕ್ ಕ್ಲಾಸೆನ್ ಹಾಗೂ ನಿತೀಶ್ ರೆಡ್ಡಿ ತಂಡಕ್ಕೆ ಆಸರೆಯಾದರು. ರೆಡ್ಡಿ ವಿಕೆಟನ್ನು ಉರುಳಿಸಿದ ಸಿದ್ದಾರ್ಥ್ ಈ ಜೋಡಿಯನ್ನು ಬೇರ್ಪಡಿಸಿದರು.
ಕ್ಲಾಸೆನ್ ಹಾಗೂ ಹರ್ಷ ದುಬೆ(0)ಅವರು ಅವೇಶ್ ಖಾನ್(2-36) ಎಸೆದ 19ನೇ ಓವರ್ನ ಸತತ ಎಸೆತಗಳಲ್ಲಿ ಔಟಾದರು. ಶಿವಾಂಗ್ ಕುಮಾರ್(5 ರನ್), ಹರ್ಷಲ್ ಪಟೇಲ್(4 ರನ್)ಕೊನೆಯ ಓವರ್ನಲ್ಲಿ ವಿಕೆಟ್ ಕೈಚೆಲ್ಲಿದರು.
ಲಕ್ನೊ ತಂಡದ ಪರವಾಗಿ ಮುಹಮ್ಮದ್ ಶಮಿ(2-9), ಪ್ರಿನ್ಸ್ ಯಾದವ್(2-34)ಹಾಗೂ ಅವೇಶ್ ಖಾನ್(2-36) ತಲಾ ಎರಡು ವಿಕೆಟ್ಗಳನ್ನು ಪಡೆದರು.






