ಐಪಿಎಲ್-2026| ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಲಭ್ಯ

ಹಾರ್ದಿಕ್ ಪಾಂಡ್ಯ | Photo Credit : PTI
ಮುಂಬೈ, ಎ.6: ರಾಜಸ್ಥಾನ ರಾಯಲ್ಸ್ ವಿರುದ್ಧ ಗುವಾಹಟಿಯ ಬರ್ಸಪಾರದ ಎಸಿಎ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಲಭ್ಯವಿರಲಿದ್ದಾರೆ ಎಂದು ಬೌಲಿಂಗ್ ಕೋಚ್ ಪರಾಸ್ ಮ್ಹಾಂಬ್ರೆ ಸೋಮವಾರ ದೃಢಪಡಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಹಿಂದಿನ ಪಂದ್ಯದಲ್ಲಿ ಆಲ್ರೌಂಡರ್ ಪಾಂಡ್ಯ ಆಡಿರಲಿಲ್ಲ. ಪಂದ್ಯಕ್ಕಿಂತ ಮೊದಲು ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು.
‘‘ಹಾರ್ದಿಕ್ ಪಾಂಡ್ಯ ಲಭ್ಯವಿದ್ದಾರೆ. ಅವರು ಕೆಲವು ನೆಟ್ ಸೆಶನ್ನಲ್ಲಿ ಭಾಗವಹಿಸಿದ್ದಾರೆ. ಅವರೀಗ ಕ್ಷೇಮವಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಅವರಿಗೆ ಗಾಯವಾಗಿರಲಿಲ್ಲ. ಆದರೆ ಅಸೌಖ್ಯಗೊಂಡಿದ್ದರು. ಹೀಗಾಗಿ ಅವರು ಕಳೆದ ಪಂದ್ಯದಲ್ಲಿ ಲಭ್ಯವಿರಲಿಲ್ಲ’’ ಎಂದು ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಬೌಲಿಂಗ್ ಕೋಚ್ ಪರಾಸ್ ಹೇಳಿದ್ದಾರೆ.
ಹಾರ್ದಿಕ್ ಬದಲಿಗೆ ಆಡಿದ್ದ ದೀಪಕ್ ಚಹಾರ್ ಡೆಲ್ಲಿ ತಂಡದ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್ನಲ್ಲಿ ಕೆ.ಎಲ್.ರಾಹುಲ್ ವಿಕೆಟನ್ನು ಪಡೆದಿದ್ದರು.
ಮೊದಲ ಆರು ಓವರ್ಗಳಲ್ಲಿ ಎರಡು ವಿಕೆಟನ್ನು ಉರುಳಿಸಿದ ಹೊರತಾಗಿಯೂ ಮುಂಬೈ ಮೂಲದ ಫ್ರಾಂಚೈಸಿ 163 ರನ್ ಗುರಿ ಬೆನ್ನಟ್ಟುತ್ತಿದ್ದ ಡೆಲ್ಲಿ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲವಾಯಿತು. ಡೆಲ್ಲಿ ತಂಡವು 11 ಎಸೆತಗಳು ಬಾಕಿ ಇರುವಾಗಲೇ ಆರು ವಿಕೆಟ್ಗಳ ಅಂತರದಿಂದ ಜಯಶಾಲಿಯಾಯಿತು.
ಕೆಕೆಆರ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ತಂಡ ಈ ವರ್ಷದ ಐಪಿಎಲ್ನಲ್ಲಿ ಆಡಿದ್ದ ತನ್ನ ಮೊದಲ ಪಂದ್ಯದಲ್ಲಿ ಪಾಂಡ್ಯ ಅವರು ಔಟಾಗದೆ 18 ರನ್ ಗಳಿಸಿದ್ದರು. 39 ರನ್ಗೆ ಒಂದು ವಿಕೆಟ್ ಪಡೆದಿದ್ದರು.






