IPL 2026 | GTಗೆ ರೋಚಕ ಜಯ: ಹೊಸ ಇತಿಹಾಸ ಬರೆದ ಜೋಸ್ ಬಟ್ಲರ್

ಜೋಸ್ ಬಟ್ಲರ್ | Photo Credit : PTI
ಮುಂಬೈ: ಗುಜರಾತ್ ಟೈಟನ್ಸ್ ತಂಡದ ಬ್ಯಾಟರ್ ಜೋಸ್ ಬಟ್ಲರ್ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟಿ20 ಕ್ರಿಕೆಟ್ ನ 600ನೇ ಸಿಕ್ಸರ್ ಬಾರಿಸುವ ಮೂಲಕ ಐಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೈಲುಗಲ್ಲು ದಾಟಿದ ಐದನೇ ಆಗಿ ಇಂಗ್ಲೆಂಡ್ ನ ಸ್ಟಾರ್ ಬ್ಯಾಟರ್ ಸೇರ್ಪಡೆಯಾಗಿದ್ದಾರೆ. ಕ್ರಿಸ್ ಗೇಲ್ (1056), ಕಿರನ್ ಪೋಲಾರ್ಡ್ (981), ಆಂಡ್ರೆ ರಸೆಲ್ (784) ಮತ್ತು ನಿಕೊಲಸ್ ಪೂರನ್ (712) ಈ ಮೈಲುಗಲ್ಲು ದಾಟಿದ ಇತರ ನಾಲ್ವರು ಆಟಗಾರರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬಟ್ಲರ್ ಐದು ಸಿಕ್ಸರ್ ಮತ್ತು ಮೂರು ಬೌಂಡರಿ ಸಹಿತ 192.59 ಸ್ಟ್ರೈಕ್ ರೇಟ್ನಲ್ಲಿ ಕೇವಲ 27 ಎಸೆತಗಳಲ್ಲಿ 52 ರನ್ ಸಿಡಿಸಿದರು. ಇವರ ಐದು ಸಿಕ್ಸರ್ಗಳು ಮೊದಲ ಆರು ಓವರ್ ಗಳಲ್ಲಿ ಬಂದಿದ್ದು, ಆರಂಭಿಕ ಬ್ಯಾಟರ್ ಹೊರತುಪಡಿಸಿ ಇತರ ಆಟಗಾರರು ಆರು ಓವರ್ ಗಳೊಳಗೆ ಗಳಿಸಿದ ಎರಡನೇ ಗರಿಷ್ಠ ರನ್ ಇದಾಗಿದೆ. ಇದಕ್ಕೂ ಮುನ್ನ 2014ರ ಐಪಿಎಲ್ ನಲ್ಲಿ ಸುರೇಶ್ ರೈನಾ 25 ಎಸೆತಗಳಲ್ಲಿ 87 ರನ್ ಗಳಿಸಿದ್ದರು.
ಈ ಅರ್ಧಶತಕದೊಂದಿಗೆ 16 ಪಂದ್ಯಗಳ ಬಳಿಕ ಮೊದಲ ಬಾರಿಗೆ ಟಿ20 ಅರ್ಧಶತಕ ಗಳಿಸಿದಂತಾಗಿದೆ. SA20 ಟೂರ್ನಿಯಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ವಿರುದ್ಧ ಡರ್ಬನ್ ಸೂಪರ್ ಜೈಂಟ್ಸ್ ಪರ ಈ ವರ್ಷಾರಂಭದಲ್ಲಿ ಬಟ್ಲರ್ ಅರ್ಧಶತಕ ಗಳಿಸಿದ್ದರು. ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್ ನಲ್ಲಿ ಎಂಟು ಇನ್ನಿಂಗ್ಸ್ ಗಳಲ್ಲಿ 10.87 ಸರಾಸರಿಯಲ್ಲಿ ಕೇವಲ 87 ರನ್ ಗಳಿಸಿದ್ದರು.
ಐಪಿಎಲ್ ನ ಮೊದಲ ಮೂರು ಪಂದ್ಯಗಳಲ್ಲಿ ಬಟ್ಲರ್ 38.66 ಸರಾಸರಿಯಲ್ಲಿ 116 ರನ್ ಗಳಿಸಿದ್ದು, 156 ಸ್ಟ್ರೈಕ್ರೇಟ್ ಹೊಂದಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಈ ವರ್ಷ ಅವರು 422 ರನ್ ಗಳನ್ನು 19 ಇನ್ನಿಂಗ್ಸ್ಗಳಲ್ಲಿ 23.44 ಸರಾಸರಿಯೊಂದಿಗೆ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಸೇರಿವೆ.
ಸಾಯಿ ಸುದರ್ಶನ್ ಅಗ್ಗದ ಮೊತ್ತಕ್ಕೆ (12) ವಿಕೆಟ್ ಒಪ್ಪಿಸಿದರೂ, ಬಟ್ಲರ್ ಹಾಗೂ ಶುಭಮನ್ ಗಿಲ್ ಗುಜರಾತ್ ಟೈಟನ್ಸ್ಗೆ ಆಸರೆಯಾದರು. ವಾಷಿಂಗ್ಟನ್ ಸುಂದರ್ (32 ಎಸೆತಗಳಲ್ಲಿ 55) ಅವರ ಉಪಯುಕ್ತ ಕೊಡುಗೆಯೊಂದಿಗೆ ಜಿಟಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಕೆ.ಎಲ್. ರಾಹುಲ್ 52 ಎಸೆತಗಳಲ್ಲಿ 92 ರನ್ ಸಿಡಿಸಿದರೂ, ಒಂದು ರನ್ ಅಂತರದ ಸೋಲು ಅನುಭವಿಸಬೇಕಾಯಿತು. 20 ಎಸೆತಗಳಲ್ಲಿ 41 ರನ್ ಸಿಡಿಸಿದ ಡೇವಿಡ್ ಮಿಲ್ಲರ್ ಕೊನೆಯ ಎಸೆತದವರೆಗೂ ಹೋರಾಟ ಮುಂದುವರಿಸಿದರು.







