IPL 2026 | ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ : ಡೆಲ್ಲಿ ವಿರುದ್ಧ ಹೈದರಾಬಾದ್ ಜಯಭೇರಿ

Photo Credit : X
ಹೈದರಾಬಾದ್, ಎ.21: ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾರ(ಔಟಾಗದೆ 135, 68 ಎಸೆತ, 10 ಬೌಂಡರಿ, 10 ಸಿಕ್ಸರ್)ಅಬ್ಬರದ ಬ್ಯಾಟಿಂಗ್ ಹಾಗೂ ಇಶಾನ್ ಮಾಲಿಂಗ(4-32) ನೇತೃತ್ವದಲ್ಲಿ ಶಿಸ್ತುಬದ್ಧ ಬೌಲಿಂಗ್ ದಾಳಿಯ ಬಲದಿಂದ ಆತಿಥೇಯ ಸನ್ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್ಗಳ ಅಂತರದಿಂದ ಮಣಿಸಿದೆ.
ಈ ಗೆಲುವಿನ ಮೂಲಕ ಎಸ್ಆರ್ಎಚ್ ತಂಡ ಏಳನೇ ಪಂದ್ಯದಲ್ಲಿ ನಾಲ್ಕನೇ ಜಯದೊಂದಿಗೆ ಎಂಟು ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಭಡ್ತಿ ಪಡೆದಿದೆ.
ರಾಜೀವ್ ಗಾಂಧಿ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ 31ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡವು ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 242 ರನ್ ಗಳಿಸಿದೆ. ಗೆಲ್ಲಲು ಕಠಿಣ ಗುರಿ ಪಡೆದ ಡೆಲ್ಲಿ ತಂಡವು ನಿತೀಶ್ ರಾಣಾ ಅವರ ಅರ್ಧಶತಕದ(57 ರನ್, 30 ಎಸೆತ, 7 ಬೌಂಡರಿ,3 ಸಿಕ್ಸರ್)ಕೊಡುಗೆಯ ಹೊರತಾಗಿಯೂ 20 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 195 ರನ್ ಗಳಿಸಿ ಸೋಲೊಪ್ಪಿಕೊಂಡಿದೆ.
ಡೆಲ್ಲಿ ಪರ ಸಮೀರ್ ರಿಝ್ವಿ(41, 28 ಎಸೆತ, 2 ಬೌಂಡರಿ, 2 ಸಿಕ್ಸರ್), ಕೆ.ಎಲ್.ರಾಹುಲ್(37 ರನ್, 23 ಎಸೆತ)ಹಾಗೂ ಟ್ರಿಸ್ಟನ್ ಸ್ಟಬ್ಸ್(27 ರನ್, 16 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಹೈದರಾಬಾದ್ ಪರ ಮಾಲಿಂಗ ಯಶಸ್ವಿ ಪ್ರದರ್ಸನ ನೀಡಿದರು. ಹರ್ಷ ದುಬೆ(3-12) ಮಾಲಿಂಗಗೆ ಉತ್ತಮ ಸಾಥ್ ನೀಡಿದರು.
ಇದಕ್ಕೂ ಮೊದಲು ಟ್ರಾವಿಸ್ ಹೆಡ್(37 ರನ್, 26 ಎಸೆತ, 2 ಬೌಂಡರಿ, 2 ಸಿಕ್ಸರ್)ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಅಭಿಷೇಕ್ 53 ಎಸೆತಗಳಲ್ಲಿ 97 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು.
ಹೆಡ್ ಔಟಾದ ನಂತರ ನಾಯಕ ಇಶಾನ್ ಕಿಶನ್(25 ರನ್, 13 ಎಸೆತ)ಅವರೊಂದಿಗೆ ಕೈಜೋಡಿಸಿದ ಅಭಿಷೇಕ್ ಎರಡನೇ ವಿಕೆಟ್ಗೆ ಕೇವಲ 35 ಎಸೆತಗಳಲ್ಲಿ ಇನ್ನೂ 79 ರನ್ ಜೊತೆಯಾಟದಲ್ಲಿ ಭಾಗಿಯಾದರು.
ಕಿಶನ್ 15ನೇ ಓವರ್ನಲ್ಲಿ ರಾಣಾರಿಂದ ರನೌಟಾದರು. ನಿತೀಶ್ ರಾಣಾ ಅವರ 15ನೇ ಓವರ್ನಲ್ಲಿ ಸತತ ಎರಡು ಸಿಕ್ಸರ್ಗಳನ್ನು ಸಿಡಿಸಿದ ಅಭಿಷೇಕ್ 47 ಎಸೆತಗಳಲ್ಲಿ ಐಪಿಎಲ್ ಟೂರ್ನಿಯಲ್ಲಿ ತನ್ನ ಎರಡನೇ ಶತಕವನ್ನು ಪೂರೈಸಿದರು.
ಅಭಿಷೇಕ್ ಟಿ-20 ಕ್ರಿಕೆಟ್ನಲ್ಲಿ 9ನೇ ಶತಕ ದಾಖಲಿಸಿದರು. ಇದರಲ್ಲಿ 8 ಶತಕಗಳನ್ನು 50 ಎಸೆತದೊಳಗೆ ಗಳಿಸಿದ್ದಾರೆ. 2021ರಲ್ಲಿ ತನ್ನ ಮೊದಲ ಶತಕ ಗಳಿಸಲು 50ಕ್ಕೂ ಅಧಿಕ ಎಸೆತ ಎದುರಿಸಿದ್ದರು.
184 ಇನಿಂಗ್ಸ್ಗಳಲ್ಲಿ 9ನೇ ಶತಕ ಗಳಿಸಿದ ಅಭಿಷೇಕ್ ಅವರು ವಿರಾಟ್ ಕೊಹ್ಲಿ (9 ಶತಕ, 403 ಇನಿಂಗ್ಸ್) ಸಾಧನೆ ಸರಿಗಟ್ಟಿದರು. ಕ್ರಿಸ್ ಗೇಲ್, ಬಾಬರ್ ಆಝಮ್ ಹಾಗೂ ಡೇವಿಡ್ ವಾರ್ನರ್ ಮಾತ್ರ ಅಭಿಷೇಕ್ಗಿಂತ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ.
ಅಭಿಷೇಕ್ ಹಾಗೂ ಹೆನ್ರಿಕ್ ಕ್ಲಾಸೆನ್(ಔಟಾಗದೆ 37, 13 ಎಸೆತ, 3 ಬೌಂಡರಿ, 3 ಸಿಕ್ಸರ್)ಮೂರನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 66 ರನ್ ಸೇರಿಸಿ ತಂಡದ ಮೊತ್ತವನ್ನು 242 ರನ್ಗಳಿಗೆ ತಲುಪಿಸಿದರು. ಅಭಿಷೇಕ್ ಹಾಗೂ ಕ್ಲಾಸೆನ್ ಅವರು ಮುಕೇಶ್ ಕುಮಾರ್ ಅವರ ಕೊನೆಯ ಓವರ್ನಲ್ಲಿ 20 ರನ್ ಸೇರಿಸಿದರು.
ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಬೌಲಿಂಗ್ ಆಯ್ದುಕೊಂಡಿರುವ ಡೆಲ್ಲಿ ಪರ ನಾಯಕ ಅಕ್ಷರ್ ಪಟೇಲ್(1-23)ಮಾತ್ರ ವಿಕೆಟ್ ಪಡೆದರು. ನಿತೀಶ್ ರಾಣಾ 4 ಓವರ್ಗಳಲ್ಲಿ 55 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.






