IPL 2026 | ಧೋನಿ ಸಂಪೂರ್ಣ ಫಿಟ್, ಮುಂಬೈ ವಿರುದ್ಧ ಆಡಲಿದ್ದಾರೆ: ಅಶ್ವಿನ್

ಎಂ.ಎಸ್. ಧೋನಿ | Photo Credit: PTI
ಬೆಂಗಳೂರು, ಎ.22: ಇಂಡಿಯನ್ ಪ್ರೀಮಿಯರ್ ಲೀಗ್ನ ಎರಡು ಯಶಸ್ವಿ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಗುರುವಾರ ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ.
‘‘ಸಿಎಸ್ಕೆ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದು, ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ’’ ಎಂದು ಸಿಎಸ್ಕೆ ತಂಡದ ಮಾಜಿ ಆಟಗಾರ ಆರ್. ಅಶ್ವಿನ್ ತಿಳಿಸಿದ್ದಾರೆ.
19ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗಾಗಲೇ 7 ಪಂದ್ಯಗಳನ್ನು ಆಡಿದ್ದು, ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಐದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
‘‘ಮುಂದಿನ ಪಂದ್ಯದಲ್ಲಿ ಧೋನಿ ಅವರನ್ನು ಮೈದಾನದಲ್ಲಿ ನೋಡಲು ಕಾದು ಕುಳಿತಿರುವ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಗುವ ಸಾಧ್ಯತೆಯಿದೆ. ಅವರು ಗುರುವಾರ ನಡೆಯಲಿರುವ ಪಂದ್ಯದಲ್ಲಿ ಸಿಎಸ್ಕೆ ಪರ ಮೈದಾನಕ್ಕೆ ಇಳಿಯುವ ನಿರೀಕ್ಷೆಯಿದೆ’’ ಎಂದು ಅಶ್ವಿನ್ ಹೇಳಿದ್ದಾರೆ.
‘‘ಧೋನಿ ಅವರು ನೆಟ್ ಗಳಲ್ಲಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಎರಡನ್ನೂ ಅಭ್ಯಾಸ ಮಾಡುತ್ತಿದ್ದಾರೆ. ಅವರು ಮುಂದಿನ ಪಂದ್ಯದಲ್ಲಿ ಆಡುವುದು ಬಹುತೇಕ ದೃಢಪಟ್ಟಿದೆ. ಧೋನಿ ಅವರು ತಂಡದ ವಿದೇಶಿ ವೇಗಿಗಳಾದ ಮ್ಯಾಟ್ ಹೆನ್ರಿ ಹಾಗೂ ಜೇಮಿ ಓವರ್ಟನ್ ಅವರನ್ನು ನೆಟ್ನಲ್ಲಿ ಎದುರಿಸಿದ್ದಾರೆ. ಯಾವುದೇ ನೋವು ಇಲ್ಲದೆ ನಿರಾಳವಾಗಿ ಕಂಡುಬಂದಿದ್ದಾರೆ’’ ಎಂದು ಅಶ್ವಿನ್ ಹೇಳಿದ್ದಾರೆ.
‘‘ಧೋನಿ ಅವರು ನೆಟ್ ಗಳಲ್ಲಿ ಕೀಪಿಂಗ್ ಮಾಡುವುದನ್ನು ನಾನು ಇದುವರೆಗೂ ನೋಡಿರಲಿಲ್ಲ. ಆದರೆ ಇಂದು ಅವರು ಕೀಪಿಂಗ್ ಮಾಡುತ್ತಿದ್ದರು. ಇದನ್ನು ಗಮನಿಸಿದರೆ ಅವರು ಮುಂದಿನ ಪಂದ್ಯದಲ್ಲಿ ಸಿಎಸ್ಕೆ ಪರ ವಿಕೆಟ್ ಕೀಪರ್ ಆಗಿ ಆಡುವ ಸಾಧ್ಯತೆಯಿದೆ. ಸಂಜು ಸ್ಯಾಮ್ಸನ್ ಕ್ಷೇತ್ರರಕ್ಷಕನಾಗಿ ಆಡಬೇಕಾಗುತ್ತದೆ ಅಥವಾ ಇಂಪ್ಯಾಕ್ಟ್ ಆಟಗಾರನಾಗಿ ಆಡುವ ಸಾಧ್ಯತೆಯಿದೆ’’ ಎಂದು ಅಶ್ವಿನ್ ಹೇಳಿದ್ದಾರೆ.






