IPL-2026| ಇ-ಸಿಗರೇಟ್ ಸೇದಿದ ರಿಯಾನ್ ಪರಾಗ್ಗೆ ಪಂದ್ಯ ಶುಲ್ಕದ 25% ದಂಡ

ರಿಯಾನ್ ಪರಾಗ್ | Photo Credit : PTI
ಮುಂಬೈ, ಎ. 30: ಪಂಜಾಬ್ನ ಮುಲ್ಲನ್ಪುರದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ವೇಳೆ ಇ-ಸಿಗರೇಟ್ ಸೇದಿರುವ ಆರೋಪ ಎದುರಿಸುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ಗೆ ಪಂದ್ಯಶುಲ್ಕದ 25 ಶೇಕಡ ದಂಡ ವಿಧಿಸಲಾಗಿದೆ.
ಮಂಗಳವಾರ ನಡೆದ ಪಂದ್ಯದ ವೇಳೆ, ಅವರು ಇ-ಸಿಗರೆಟ್ ಸೇದುವುದು ಕ್ಯಾಮರದಲ್ಲಿ ಸೆರೆಯಾಗಿತ್ತು. ಅವರ ಕೃತ್ಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಮೈದಾನದ ಅಂಪೈರ್ಗಳಾದ ತನ್ಮಯ್ ಶ್ರೀವಾಸ್ತವ ಮತ್ತು ನಿತಿನ್ ಮೆನನ್ ಈ ವಿಷಯವನ್ನು ಪಂದ್ಯ ರೆಫರಿ ಅಮಿತ್ ಶರ್ಮಾರ ಗಮನಕ್ಕೆ ಪಂದ್ಯ ಮುಗಿದ ತಕ್ಷಣ ತಂದಿರಲಿಲ್ಲ ಎಂದು ಪಿಟಿಐ ವರದಿ ಮಾಡಿದೆ. ಆದರೆ, ಪರಾಗ್ ಇ-ಸಿಗರೆಟ್ ಸೇದುವ ವೀಡಿಯೊ ವೈರಲ್ ಆದ ಬಳಿಕವಷ್ಟೇ ಘಟನೆಯನ್ನು ಪಂದ್ಯ ರೆಫರಿಗೆ ವರದಿ ಮಾಡಿದರು.
ಪರಾಗ್ ಐಪಿಎಲ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದನ್ನು ಪಂದ್ಯ ರೆಫರಿ ಅಮಿತ್ ಶರ್ಮಾ ಕಂಡುಕೊಂಡರು.
ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಆಟಗಾರರು ಮತ್ತು ತಂಡದ ಅಧಿಕಾರಿಗಳಿಗಾಗಿರುವ ಐಪಿಎಲ್ ನೀತಿಸಂಹಿತೆ ಒಂದನೇ ಹಂತವನ್ನು ಉಲ್ಲಂಘಿಸಿರುವುದಕ್ಕಾಗಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ಗೆ ಪಂದ್ಯಶುಲ್ಕದ 25 ಶೇಕಡ ದಂಡವನ್ನು ವಿಧಿಸಲಾಗಿದೆ ಹಾಗೂ ಒಂದು ಡೀಮೆರಿಟ್ ಅಂಕವನ್ನೂ ನೀಡಲಾಗಿದೆ’’ ಎಂದು ಬಿಸಿಸಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ರಿಯಾನ್ ಐಪಿಎಲ್ ನೀತಿ ಸಂಹಿತೆಯ 2.21 ವಿಧಿಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಇದು ಕ್ರೀಡೆಗೆ ಅಪಖ್ಯಾತಿ ತರುತ್ತದೆ. ಘಟನೆಯು ಎರಡನೇ ಇನಿಂಗ್ಸ್ ವೇಳೆ ನಡೆದಿದೆ. ಆಗ ರಿಯಾನ್ ಡ್ರೆಸಿಂಗ್ ಕೋಣೆಯಲ್ಲಿ ಇ-ಸಿಗರೆಟ್ಸೇದುವುದು ಕಂಡುಬಂದಿದೆ’’ ಎಂದು ಬಿಸಿಸಿಐ ಹೇಳಿದೆ.






