IPL 2026 | ಮುಂಬೈ ಇಂಡಿಯನ್ಸ್ ವಿರುದ್ಧ CSK ಜಯಭೇರಿ

Photo | X@IPL
ಚೆನ್ನೈ, ಮೇ 2: ನಾಯಕ ಋತುರಾಜ್ ಗಾಯಕ್ವಾಡ್ (ಔಟಾಗದೆ 67, 48 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಕಾರ್ತಿಕ್ ಶರ್ಮಾ (ಔಟಾಗದೆ 54, 40 ಎಸೆತ, 4 ಬೌಂಡರಿ, 3 ಸಿಕ್ಸರ್) ಅವರ ಅಜೇಯ ಇನ್ನಿಂಗ್ಸ್ ನೆರವಿನಿಂದ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎಂಟು ವಿಕೆಟ್ ಗಳ ಅಂತರದಿಂದ ಮಣಿಸಿದೆ.
ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದ 44ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಮನ್ ಧೀರ್ (57, 37 ಎಸೆತ, 4 ಬೌಂಡರಿ, 3 ಸಿಕ್ಸರ್) ಅವರ ಅರ್ಧಶತಕ ಹಾಗೂ ಆರಂಭಿಕ ಬ್ಯಾಟರ್ ರಯಾನ್ ರಿಕೆಲ್ಟನ್ (37, 24 ಎಸೆತ, 5 ಬೌಂಡರಿ) ಅವರ ಸಮಯೋಚಿತ ಆಟದ ನೆರವಿನಿಂದ ಮುಂಬೈ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
160 ರನ್ ಗುರಿ ಬೆನ್ನತ್ತಿದ ಸಿಎಸ್ಕೆ ತಂಡ 18.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿ ಸುಲಭ ಜಯ ಸಾಧಿಸಿತು.
ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ (11, 9 ಎಸೆತ) ಇನಿಂಗ್ಸ್ ನ ಎರಡನೇ ಓವರ್ನಲ್ಲಿ ಜಸ್ಪ್ರಿತ್ ಬುಮ್ರಾ ಅವರಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಗಾಯಕ್ವಾಡ್ ಹಾಗೂ ಉರ್ವಿಲ್ ಪಟೇಲ್ (24, 12 ಎಸೆತ) ಎರಡನೇ ವಿಕೆಟ್ ಗೆ 49 ರನ್ ಜೊತೆಯಾಟ ಕಟ್ಟಿದರು.
ಪಟೇಲ್ ಔಟಾದ ಬಳಿಕ ಗಾಯಕ್ವಾಡ್ ಮತ್ತು ಕಾರ್ತಿಕ್ ಮೂರನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 75 ಎಸೆತಗಳಲ್ಲಿ 98 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಚೆನ್ನೈ ಸೂಪರ್ ಕಿಂಗ್ಸ್: 18.1 ಓವರ್ಗಳಲ್ಲಿ 160/2
ಋತುರಾಜ್ ಗಾಯಕ್ವಾಡ್ ಔಟಾಗದೆ 67, ಕಾರ್ತಿಕ್ ಶರ್ಮಾ ಔಟಾಗದೆ 54; ಜಸ್ಪ್ರಿತ್ ಬುಮ್ರಾ 1/20






