IPL 2026 | ಗುಜರಾತ್ ವಿರುದ್ಧ ಸನ್ ರೈಸರ್ಸ್ ಗೆ ಹೀನಾಯ ಸೋಲು; 86ಕ್ಕೆ ಆಲೌಟ್!

PHOTO CREDIT : x@IPL
ಅಹ್ಮದಾಬಾದ್, ಮೇ 12: ಸಾಯಿ ಸುದರ್ಶನ್ (61 ರನ್, 44 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ವಾಶಿಂಗ್ಟನ್ ಸುಂದರ್ (50 ರನ್, 33 ಎಸೆತ, 7 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ಕೊಡುಗೆ, ಜೇಸನ್ ಹೋಲ್ಡರ್ (3-20) ಹಾಗೂ ಕಾಗಿಸೊ ರಬಾಡ (3-28) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 82 ರನ್ ಗಳ ಅಂತರದಿಂದ ಮಣಿಸಿದೆ.
ತವರು ಮೈದಾನದಲ್ಲಿ ಭರ್ಜರಿ ಗೆಲುವು ಪಡೆದಿರುವ ಗುಜರಾತ್ ತಂಡವು 12 ಪಂದ್ಯಗಳಲ್ಲಿ 16 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಮಂಗಳವಾರ ನಡೆದ 56ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಗುಜರಾತ್ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 168 ರನ್ ಗಳಿಸಿತು. ಗೆಲ್ಲಲು 169 ರನ್ ಗುರಿ ಪಡೆದ ಸನ್ ರೈಸರ್ಸ್ ತಂಡವು 14.5 ಓವರ್ ಗಳಲ್ಲಿ ಕೇವಲ 86 ರನ್ ಗಳಿಸಿ ಆಲೌಟಾಯಿತು.
ಇನಿಂಗ್ಸ್ ನ ಮೊದಲ ಓವರ್ನ ನಾಲ್ಕನೇ ಎಸೆತದಲ್ಲಿ ಟ್ರಾವಿಸ್ ಹೆಡ್ (0) ವಿಕೆಟ್ ಕಳೆದುಕೊಂಡ ಸನ್ ರೈಸರ್ಸ್ ತಂಡವು ಕಳಪೆ ಆರಂಭ ಪಡೆಯಿತು. ಅಭಿಷೇಕ್ ಶರ್ಮಾ (6 ರನ್), ನಾಯಕ ಇಶಾನ್ ಕಿಶನ್ (11 ರನ್) ಹಾಗೂ ಆರ್. ಸ್ಮರಣ್ (9 ರನ್) ಪವರ್ ಪ್ಲೇನೊಳಗೆ ವಿಕೆಟ್ ಕೈಚೆಲ್ಲಿದರು.
ಸಲೀಲ್ ಅರೋರಾ (16 ರನ್), ಹೆನ್ರಿಕ್ ಕ್ಲಾಸೆನ್ (14 ರನ್), ನಿತೀಶ್ ರೆಡ್ಡಿ (2 ರನ್), ಶಿವಾಂಗ್ ಕುಮಾರ್ (4 ರನ್) ಹಾಗೂ ನಾಯಕ ಪ್ಯಾಟ್ ಕಮಿನ್ಸ್ ಪೆವಿಲಿಯನ್ಗೆ ಪರೇಡ್ ನಡೆಸಿದರು.
ಬ್ಯಾಟಿಂಗ್ ನಲ್ಲಿ ದಯನೀಯ ವೈಫಲ್ಯ ಕಂಡಿರುವ ಸನ್ ರೈಸರ್ಸ್ ತಂಡದ ಪರ ನಾಯಕ ಕಮಿನ್ಸ್ (19 ರನ್) ಸರ್ವಾಧಿಕ ಸ್ಕೋರ್ ಗಳಿಸಿದರು.
ಇದಕ್ಕೂ ಮೊದಲು ಗುಜರಾತ್ ತಂಡವು ಪವರ್ ಪ್ಲೇಗಿಂತ ಮೊದಲೇ 26 ರನ್ ಗಳಿಸುವಷ್ಟರಲ್ಲಿ ನಾಯಕ ಶುಭಮನ್ ಗಿಲ್ (5 ರನ್) ಹಾಗೂ ಜೋಸ್ ಬಟ್ಲರ್ (7 ರನ್) ವಿಕೆಟ್ ಗಳನ್ನು ಕಳೆದುಕೊಂಡಿತು.
ಮೂರನೇ ವಿಕೆಟ್ ಗೆ 26 ಎಸೆತಗಳಲ್ಲಿ 38 ರನ್ ಜೊತೆಯಾಟ ನಡೆಸಿದ ನಿಶಾಂತ್ ಸಿಂಧು (22 ರನ್, 14 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಸುದರ್ಶನ್ ಇನಿಂಗ್ಸ್ ಕಟ್ಟಲು ಯತ್ನಿಸಿದರು.
ಸಿಂಧು ಔಟಾದಾಗ ಜೊತೆಯಾದ ಸುದರ್ಶನ್ ಹಾಗೂ ಸುಂದರ್ ನಾಲ್ಕನೇ ವಿಕೆಟ್ ಗೆ 41 ಎಸೆತಗಳಲ್ಲಿ 60 ರನ್ ಸೇರಿಸಿ ತಂಡದ ಮೊತ್ತವನ್ನು 124ಕ್ಕೆ ತಲುಪಿಸಿದರು.
ಸುಂದರ್ ಹಾಗೂ ಜೇಸನ್ ಹೋಲ್ಡರ್ (ಔಟಾಗದೆ 11, 10 ಎಸೆತ) ಐದನೇ ವಿಕೆಟ್ ಗೆ 21 ಎಸೆತಗಳಲ್ಲಿ 40 ರನ್ ಸೇರಿಸಿ ಗುಜರಾತ್ ತಂಡವು ಗೌರವಾರ್ಹ ಮೊತ್ತ ಗಳಿಸುವಲ್ಲಿ ನೆರವಾದರು.
ಸನ್ ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಪ್ರಫುಲ್ ಹಿಂಗೇ (2-17) ಹಾಗೂ ಸಾಕಿಬ್ ಹುಸೇನ್ (2-37) ತಲಾ ಎರಡು ವಿಕೆಟ್ಗಳನ್ನು ಪಡೆದಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್ (1-20) ಒಂದು ವಿಕೆಟ್ ಪಡೆದಿದ್ದಲ್ಲದೆ, ಮಿತವ್ಯಯಿಯಾಗಿ ಎನಿಸಿಕೊಂಡರು.
►ಸಂಕ್ಷಿಪ್ತ ಸ್ಕೋರ್
ಗುಜರಾತ್ ಟೈಟಾನ್ಸ್: 20 ಓವರ್ ಗಳಲ್ಲಿ 168/5
(ಸಾಯಿ ಸುದರ್ಶನ್ 61, ವಾಶಿಂಗ್ಟನ್ ಸುಂದರ್ 50, ನಿಶಾಂತ್ ಸಿಂಧು 22, ಪ್ರಫುಲ್ ಹಿಂಗೇ 2-17, ಸಾಕಿಬ್ ಹುಸೇನ್ 2-37)
ಸನ್ ರೈಸರ್ಸ್ ಹೈದರಾಬಾದ್: 14.5 ಓವರ್ ಗಳಲ್ಲಿ 86 ರನ್ ಗೆ ಆಲೌಟ್
(ಕಮಿನ್ಸ್ 19, ಜೇಸನ್ ಹೋಲ್ಡರ್ 3-20, ಕಾಗಿಸೊ ರಬಾಡ 3-28, ಪ್ರಸಿದ್ಧ ಕೃಷ್ಣ 2-23)






