IPL 2026 | RCBಗೆ SRH ವಿರುದ್ಧ ಸೋಲು

photo credit : PTI
ಹೈದರಾಬಾದ್, ಮೇ 22: ಇಶಾನ್ ಕಿಶನ್ (79 ರನ್, 46 ಎಸೆತ, 8 ಬೌಂಡರಿ, 3 ಸಿಕ್ಸರ್), ಅಭಿಷೇಕ್ ಶರ್ಮಾ (56 ರನ್, 22 ಎಸೆತ, 4 ಬೌಂಡರಿ, 5 ಸಿಕ್ಸರ್) ಹಾಗೂ ಹೆನ್ರಿಕ್ ಕ್ಲಾಸೆನ್ (51 ರನ್, 24 ಎಸೆತ, 2 ಬೌಂಡರಿ, 5 ಸಿಕ್ಸರ್) ಅವರ ಅರ್ಧಶತಕಗಳ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 55 ರನ್ ಗಳ ಅಂತರದಿಂದ ಮಣಿಸಿದೆ.
ಶುಕ್ರವಾರ ನಡೆದ 67ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಜಯಿಸಿದ SRH ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ಗಳ ನಷ್ಟಕ್ಕೆ 255 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ RCB ತಂಡವು 20 ಓವರ್ ಗಳಲ್ಲಿ ನಾಲ್ಕು ವಿಕೆಟ್ಗಳ ನಷ್ಟಕ್ಕೆ 200 ರನ್ ಗಳಿಸಿ ಸೋಲೊಪ್ಪಿಕೊಂಡಿತು.
RCB 14 ಪಂದ್ಯಗಳಲ್ಲಿ 5ನೇ ಸೋಲು ಕಂಡು 18 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಹೈದರಾಬಾದ್ ತಂಡವು 14 ಪಂದ್ಯಗಳಲ್ಲಿ 9ನೇ ಗೆಲುವು ದಾಖಲಿಸಿ 18 ಅಂಕ ಗಳಿಸಿದರೂ 3ನೇ ಸ್ಥಾನದಲ್ಲಿದೆ.
RCB ಪರ ನಾಯಕ ರಜತ್ ಪಾಟಿದಾರ್ (56 ರನ್, 39 ಎಸೆತ) ಸರ್ವಾಧಿಕ ಸ್ಕೋರ್ ಗಳಿಸಿದರು. ಕೃನಾಲ್ ಪಾಂಡ್ಯ (ಔಟಾಗದೆ 41, 31 ಎಸೆತ), ಆರಂಭಿಕ ಬ್ಯಾಟರ್ ವೆಂಕಟೇಶ್ ಅಯ್ಯರ್ (44 ರನ್, 19 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು. RCB 94 ರನ್ಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆಗ 5ನೇ ವಿಕೆಟ್ಗೆ ಪಾಟಿದಾರ್ ಹಾಗೂ ಪಾಂಡ್ಯ 84 ರನ್ ಸೇರಿಸಿದರೂ ಗೆಲುವು ದಕ್ಕಲಿಲ್ಲ.
ಇದಕ್ಕೂ ಮೊದಲು ಹೈದರಾಬಾದ್ ನ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ನಾಲ್ಕನೇ ಓವರ್ ನಲ್ಲಿ 45 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ರಸಿಕ್ ಸಲಾಂ ಅವರು ಹೆಡ್ ವಿಕೆಟ್ ಉರುಳಿಸಿದರು.
ಎರಡನೇ ವಿಕೆಟ್ಗೆ 52 ರನ್ ಸೇರಿಸಿದ ಅಭಿಷೇಕ್ ಹಾಗೂ ಕಿಶನ್ ತಂಡವನ್ನು ಆಧರಿಸಿದರು. ಅಭಿಷೇಕ್ ಅರ್ಧಶತಕ ಗಳಿಸಿದ ಬೆನ್ನಲ್ಲೇ ಸುಯಶ್ ಶರ್ಮಾಗೆ ವಿಕೆಟ್ ಒಪ್ಪಿಸಿದರು.
ಮೂರನೇ ವಿಕೆಟ್ಗೆ 113 ರನ್ ಜೊತೆಯಾಟದಲ್ಲಿ ಭಾಗಿಯಾದ ಕಿಶನ್ ಹಾಗೂ ಕ್ಲಾಸೆನ್ ತಂಡದ ಸ್ಕೋರನ್ನು 200ರ ಗಡಿ ದಾಟಿಸಿದರು.
ಕಿಶನ್ ಹಾಗೂ ನಿತೀಶ್ ರೆಡ್ಡಿ (ಔಟಾಗದೆ 29, 12 ಎಸೆತ, 1 ಬೌಂಡರಿ, 3 ಸಿಕ್ಸರ್) ನಾಲ್ಕನೇ ವಿಕೆಟ್ ಗೆ 45 ರನ್ ಸೇರಿಸಿ ತಂಡದ ಮೊತ್ತವನ್ನು 255ಕ್ಕೆ ತಲುಪಿಸಿದರು.
RCB ಪರ ರಾಸಿಕ್ ಸಲಾಂ (2-52) ಯಶಸ್ವಿ ಪ್ರದರ್ಶನ ನೀಡಿದರು.
RCB ನಾಯಕ ರಜತ್ ಪಾಟಿದಾರ್ ಆಡುವ 11ರ ಬಳಗಕ್ಕೆ ವಾಪಸಾದರು. ಪಾಟಿದಾರ್ ಈ ಹಿಂದಿನ ಪಂದ್ಯದಲ್ಲಿ ಆಡಿರಲಿಲ್ಲ. ಬೆರಳಿನ ಗಾಯದಿಂದಾಗಿ ಜೇಕಬ್ ಬೆಥೆಲ್ ವಿಶ್ರಾಂತಿ ಪಡೆದಿದ್ದಾರೆ.
►ಸಂಕ್ಷಿಪ್ತ ಸ್ಕೋರ್
►ಸನ್ರೈಸರ್ಸ್ ಹೈದರಾಬಾದ್: 20 ಓವರ್ಗಳಲ್ಲಿ 255/4
(ಇಶಾನ್ ಕಿಶನ್ 79, ಅಭಿಷೇಕ್ ಶರ್ಮಾ 56, ಹೆನ್ರಿಕ್ ಕ್ಲಾಸೆನ್ 51, ನಿತೀಶ್ ರೆಡ್ಡಿ ಔಟಾಗದೆ 29, ರಾಸಿಕ್ ಸಲಾಂ 2-52)
►RCB: 20 ಓವರ್ ಗಳಲ್ಲಿ 200/4
(ರಜತ್ ಪಾಟಿದಾರ್ 56, ವೆಂಕಟೇಶ್ ಅಯ್ಯರ್ 44, ಕೃನಾಲ್ ಪಾಂಡ್ಯ ಔಟಾಗದೆ 41, ಇಶಾನ್ ಮಾಲಿಂಗ 2-33)






