IPL 2026 ಫೈನಲ್ | ಕೊಹ್ಲಿ ಅಬ್ಬರ; ʼಈ ಸಲವೂ ಕಪ್ ನಮ್ದೇʼ

ವಿರಾಟ್ ಕೊಹ್ಲಿ | Photo Credit : PTI
ಅಹ್ಮದಾಬಾದ್, ಮೇ 31: ರಾಸಿಕ್ ಸಲಾಂ (3–27), ಭುವನೇಶ್ವರ್ ಕುಮಾರ್ (2–29) ಹಾಗೂ ಜೋಶ್ ಹೇಝಲ್ವುಡ್ (2–37) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿ ಮತ್ತು ವಿರಾಟ್ ಕೊಹ್ಲಿ ಅವರ ಆಕರ್ಷಕ ಬ್ಯಾಟಿಂಗ್ (ಔಟಾಗದೆ 75; 42 ಎಸೆತ, 9 ಬೌಂಡರಿ, 3 ಸಿಕ್ಸರ್) ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು 2026ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ತಂಡವನ್ನು ಐದು ವಿಕೆಟ್ಗಳ ಅಂತರದಿಂದ ಮಣಿಸಿತು.
ಈ ಮೂಲಕ RCB ತಂಡ ಸತತ ಎರಡನೇ ಬಾರಿ ಐಪಿಎಲ್ ಟ್ರೋಫಿ ಜಯಿಸಿ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ದಾಖಲೆಯನ್ನು ಸರಿಗಟ್ಟಿತು. ಸಿಎಸ್ಕೆ ತಂಡ 2010 ಹಾಗೂ 2011ರಲ್ಲಿ, ಮುಂಬೈ ಇಂಡಿಯನ್ಸ್ ತಂಡ 2019 ಹಾಗೂ 2020ರಲ್ಲಿ ಸತತವಾಗಿ ಪ್ರಶಸ್ತಿ ಗೆದ್ದಿತ್ತು.
2018ರಿಂದ ಇಲ್ಲಿಯವರೆಗೆ ಕ್ವಾಲಿಫೈಯರ್–1ರಲ್ಲಿ ಗೆದ್ದ ತಂಡವೇ ಪ್ರತಿವರ್ಷ ಐಪಿಎಲ್ ಪ್ರಶಸ್ತಿ ಜಯಿಸಿದ್ದು, ಈ ವರ್ಷ RCB ಆ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.
ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ RCB ನಾಯಕ ರಜತ್ ಪಾಟಿದಾರ್, ಗುಜರಾತ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 155 ರನ್ ಗಳಿಸಿತು. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (ಔಟಾಗದೆ 50; 37 ಎಸೆತ, 5 ಬೌಂಡರಿ) ಏಕಾಂಗಿ ಹೋರಾಟ ನೀಡಿದರು.
ಗೆಲುವಿಗೆ 156 ರನ್ಗಳ ಗುರಿ ಬೆನ್ನಟ್ಟಿದ RCB ತಂಡ 18 ಓವರ್ಗಳಲ್ಲಿ 5 ವಿಕೆಟ್ಗಳಿಗೆ 161 ರನ್ ಗಳಿಸಿ ವಿಜಯಶಾಲಿಯಾಯಿತು.
ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ (32; 16 ಎಸೆತ, 4 ಬೌಂಡರಿ, 2 ಸಿಕ್ಸರ್) ಮೊದಲ ವಿಕೆಟ್ಗೆ 4.3 ಓವರ್ಗಳಲ್ಲಿ 62 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಅಯ್ಯರ್ ಹಾಗೂ ದೇವದತ್ತ ಪಡಿಕ್ಕಲ್ (1) ಬೆನ್ನುಬೆನ್ನಿಗೆ ಔಟಾದರು. ನಾಯಕ ರಜತ್ ಪಾಟಿದಾರ್ (15) ಹಾಗೂ ಆಲ್ರೌಂಡರ್ ಕೃನಾಲ್ ಪಾಂಡ್ಯ (1) ಕೂಡ ಬೇಗನೇ ವಿಕೆಟ್ ಒಪ್ಪಿಸಿದರು.
ನಂತರ ಕೊಹ್ಲಿ ಹಾಗೂ ಟಿಮ್ ಡೇವಿಡ್ (24; 17 ಎಸೆತ) RCBಯ ಗೆಲುವನ್ನು ಖಚಿತಪಡಿಸಿದರು. ಕೊಹ್ಲಿ 25 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅರ್ಧಶತಕ ಪೂರೈಸಿದರು.
ಇದಕ್ಕೂ ಮೊದಲು 2.2 ಓವರ್ಗಳಲ್ಲಿ ನಾಯಕ ಶುಭಮನ್ ಗಿಲ್ (10; 8 ಎಸೆತ) ವಿಕೆಟ್ ಕಳೆದುಕೊಂಡ ಗುಜರಾತ್ ತಂಡ ಕಳಪೆ ಆರಂಭ ಕಂಡಿತು. ಇನ್ನೋರ್ವ ಆರಂಭಿಕ ಆಟಗಾರ ಸಾಯಿ ಸುದರ್ಶನ್ (12; 12 ಎಸೆತ) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಗುಜರಾತ್ ತಂಡಕ್ಕೆ ಮೊದಲ ವಿಕೆಟ್ಗೆ ಭದ್ರ ಬುನಾದಿ ಹಾಕಿಕೊಡುತ್ತಿದ್ದ ಈ ಇಬ್ಬರ ವಿಕೆಟ್ಗಳನ್ನು ಬೇಗನೆ ಉರುಳಿಸಿದ RCB ಆರಂಭಿಕ ಮೇಲುಗೈ ಸಾಧಿಸಿತು.
ನಿಶಾಂತ್ ಸಿಂಧು (20; 18 ಎಸೆತ), ಜೋಸ್ ಬಟ್ಲರ್ (19; 23 ಎಸೆತ) ಹಾಗೂ ಅರ್ಷದ್ ಖಾನ್ (15; 6 ಎಸೆತ) ಔಟಾಗುವಷ್ಟರಲ್ಲಿ ಗುಜರಾತ್ ತಂಡ 99 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು.
ಜೇಸನ್ ಹೋಲ್ಡರ್ (7), ರಾಹುಲ್ ತೆವಾಟಿಯಾ (7) ಹಾಗೂ ರಶೀದ್ ಖಾನ್ (7) ಕೂಡ ಪೆವಿಲಿಯನ್ ಸೇರಿದರು.
RCB ಪರ ರಾಸಿಕ್ ಸಲಾಂ (3–27) ಅತ್ಯಂತ ಯಶಸ್ವಿ ಬೌಲರ್ ಎನಿಸಿದರು. ಭುವನೇಶ್ವರ್ ಕುಮಾರ್ ಹಾಗೂ ಹೇಝಲ್ವುಡ್ ತಲಾ ಎರಡು ವಿಕೆಟ್ ಪಡೆದು ಉತ್ತಮ ಸಾಥ್ ನೀಡಿದರು.
ಇದೇ ವೇಳೆ ಕೊಹ್ಲಿ ತಮ್ಮ IPL ವೃತ್ತಿಜೀವನದ ವೇಗದ ಅರ್ಧಶತಕ ದಾಖಲಿಸಿ ತಂಡವನ್ನು ಮುನ್ನಡೆಸಿದರು.
►ಸ್ಕೋರ್ ವಿವರ
►RCB: 18 ಓವರ್ ಗಳಲ್ಲಿ 161/5
ವೆಂಕಟೇಶ್ ಅಯ್ಯರ್ ಸಿ ರಬಾಡ ಬಿ ಸಿರಾಜ್ 32
ವಿರಾಟ್ ಕೊಹ್ಲಿ ಔಟಾಗದೆ 75
ದೇವದತ್ತ ಪಡಿಕ್ಕಲ್ ಸಿ ಅರ್ಷದ್ ಖಾನ್ ಬಿ ರಬಾಡ 1
ರಜತ್ ಪಾಟಿದಾರ್ ಸಿ ರಬಾಡ ಬಿ ರಶೀದ್ ಖಾನ್ 15
ಕೃನಾಲ್ ಪಾಂಡ್ಯ ಎಲ್ಬಿಡಬ್ಲ್ಯು ಬಿ ರಶೀದ್ ಖಾನ್ 1
ಟಿಮ್ ಡೇವಿಡ್ ಸಿ ಬಟ್ಲರ್ ಬಿ ಅರ್ಷದ್ ಖಾನ್ 24
ಜಿತೇಶ್ ಶರ್ಮಾ ಔಟಾಗದೆ 11
ಇತರೆ 2
ವಿಕೆಟ್ ಪತನ: 1–62, 2–63, 3–89, 4–91, 5–132
►ಬೌಲಿಂಗ್ ವಿವರ
ಮುಹಮ್ಮದ್ ಸಿರಾಜ್ 4–0–36–1
ಕಾಗಿಸೊ ರಬಾಡ 3–0–44–1
ಜೇಸನ್ ಹೋಲ್ಡರ್ 2–0–16–0
ರಶೀದ್ ಖಾನ್ 4–0–25–2
ಅರ್ಷದ್ ಖಾನ್ 4–0–32–1
ಪ್ರಸಿದ್ಧ ಕೃಷ್ಣ 1–0–7–0






