IPL 2026 | ಹೇಗಿದೆ ಪ್ಲೇ ಆಫ್ ಅರ್ಹತಾ ಸುತ್ತಿನ ಲೆಕ್ಕಾಚಾರ?

Photo Credit : @IPL
ಹೊಸದಿಲ್ಲಿ, ಮೇ 18: ಈ ವರ್ಷದ ಐಪಿಎಲ್ ಟೂರ್ನಿಯ ಲೀಗ್ ಹಂತದಲ್ಲಿ ಕೇವಲ 8 ಪಂದ್ಯಗಳು ಆಡಲು ಬಾಕಿ ಇವೆ. ಲಕ್ನೊ ಸೂಪರ್ ಜಯಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಈಗಾಗಲೇ ಪ್ಲೇ ಆಫ್ ಅರ್ಹತಾ ಸುತ್ತಿನ ಸ್ಪರ್ಧೆಯಿಂದ ಹೊರಬಿದ್ದಿವೆ. ಆರ್ಸಿಬಿ ತಂಡ ಅರ್ಹತೆ ಗಿಟ್ಟಿಸಿಕೊಂಡಿದ್ದು, ನೆಟ್ ರನ್ ರೇಟ್ ಪ್ರಕಾರ ಗುಜರಾತ್ ಟೈಟಾನ್ಸ್ ಸ್ಪರ್ಧೆಯಿಂದ ಹೊರಬೀಳಬಹುದು.
ಸಿಎಸ್ಕೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಅಂಕಗಳ ಆಧಾರದಲ್ಲಿ ಅಗ್ರ-4ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕ್ಷೀಣಿಸಿದೆ. ಪಂಜಾಬ್ ಕಿಂಗ್ಸ್ ತಂಡ ಅಗ್ರ-4ರಲ್ಲಿ ಸ್ಥಾನ ಪಡೆಯುವ ಅವಕಾಶ ಹೊಂದಿದೆ. ವಾರಾಂತ್ಯದಲ್ಲಿ ಕೆಕೆಆರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗೆಲುವು ದಾಖಲಿಸುವ ಮೂಲಕ ತಮ್ಮ ಅವಕಾಶವನ್ನು ಹೆಚ್ಚಿಸಿಕೊಂಡಿವೆ. ಆದರೆ ಉಳಿದ ತಂಡಗಳಿಗಿಂತ ಹಿಂದುಳಿದಿವೆ.
ಆರ್ಸಿಬಿ ತಂಡವು ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿದ್ದು, ಅಂಕಗಳ ಆಧಾರದಲ್ಲಿ ನಂ.1 ಸ್ಥಾನ ಪಡೆಯಬಹುದು. ಆದರೆ ಮೊದಲ ಸ್ಥಾನ ಪಡೆಯಲು ಗುಜರಾತ್ ಹಾಗೂ ಹೈದರಾಬಾದ್ ತಂಡಗಳೊಂದಿಗೆ ಸ್ಪರ್ಧೆ ಎದುರಿಸಬಹುದು.
ಅಂಕಗಳ ಆಧಾರದಲ್ಲಿ ಗುಜರಾತ್ ತಂಡವು ಅಗ್ರ-4ರಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಎರಡನೇ ಸ್ಥಾನಕ್ಕಾಗಿ ಎಸ್ಆರ್ಎಚ್, ಸಿಎಸ್ಕೆ ಹಾಗೂ ರಾಜಸ್ಥಾನ ತಂಡಗಳೊಂದಿಗೆ ಚತುಷ್ಕೋನ ಸ್ಪರ್ಧೆ ಎದುರಿಸಲಿದೆ. ಈ ಮೂರು ತಂಡಗಳು ತಲಾ 16 ಅಂಕ ಹೊಂದಿವೆ.
ಎಸ್ಆರ್ಎಚ್ ತಂಡವು ಅಂಕಗಳ ಆಧಾರದಲ್ಲಿ ಅಗ್ರ-4ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಶೇ.87.9ರಷ್ಟಿದೆ. ಅಗ್ರ-ಎರಡರಲ್ಲಿ ಸ್ಥಾನ ಪಡೆಯುವ ಸಾಧ್ಯತೆಯು ಶೇ.50ರಷ್ಟಿದೆ.
ಸಿಎಸ್ಕೆ ಅಗ್ರ ನಾಲ್ಕರಲ್ಲಿ ಸ್ಥಾನ ಗಿಟ್ಟಿಸುವ ಸಾಧ್ಯತೆ ಇದೀಗ ಶೇ.44.9ರಷ್ಟಿದೆ. ಒಂದು ಹಾಗೂ ಇತರ ಮೂರು ತಂಡಗಳೊಂದಿಗೆ ಎರಡನೇ ಸ್ಥಾನ ಹಂಚಿಕೊಳ್ಳುವ ಸಾಧ್ಯತೆ ಶೇ.25ರಷ್ಟಿದೆ.
ರವಿವಾರದ ಪಂದ್ಯವನ್ನು ಸೋತಿರುವ ರಾಜಸ್ಥಾನ ತಂಡವು ಅಂಕಪಟ್ಟಿಯಲ್ಲಿ ಅಗ್ರ-4ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಶೇ.44.5ರಷ್ಟಿದೆ.
ರವಿವಾರದ ಪಂದ್ಯವನ್ನು ಸೋತಿರುವ ಪಂಜಾಬ್ ಕಿಂಗ್ಸ್ ತಂಡದ ಅಗ್ರ-4 ಸ್ಥಾನ ಪಡೆಯುವ ಅವಕಾಶವು ಶೇ.35.2ಕ್ಕೆ ಕುಸಿದಿದೆ. ಅಗ್ರ ಎರಡು ಸ್ಥಾನದಲ್ಲಿರುವ ತಂಡಗಳ ಪೈಕಿ ಒಂದರೊಂದಿಗೆ ಟೈ ಸಾಧಿಸುವ ವಿಶ್ವಾಸವೂ ಇಲ್ಲವಾಗಿದೆ.
ಡೆಲ್ಲಿ ತಂಡವು ರವಿವಾರದ ಪಂದ್ಯವನ್ನು ಗೆದ್ದ ನಂತರ ಅಂತಿಮ-4ರ ಹಂತಕ್ಕೇರುವ ಅವಕಾಶವು ಶೇ.19.5ರಷ್ಟಿದೆ. ಅಗ್ರ ಎರಡು ತಂಡಗಳೊಂದಿಗೆ ಟೈ ಸಾಧಿಸುವ ಸಾಧ್ಯತೆ ಇಲ್ಲವಾಗಿದೆ.
ಕೆಕೆಆರ್ ತಂಡವು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಶೇ.18ರಷ್ಟಿದೆ. ಪಂಜಾಬ್ ಹಾಗೂ ಡೆಲ್ಲಿ ತಂಡಗಳಂತೆಯೇ ಅಗ್ರ-2 ಸ್ಥಾನದಲ್ಲಿ ಟೈ ಸಾಧಿಸುವ ಸಾಧ್ಯತೆ ಇಲ್ಲ.






