ಐಪಿಎಲ್-2026ರ ಪ್ಲೇ ಆಫ್ ಪಂದ್ಯಗಳು: ಸಂಪೂರ್ಣ ವೇಳಾಪಟ್ಟಿ ಪ್ರಕಟ

Photo Credit : @ipl
ಹೊಸದಿಲ್ಲಿ, ಮೇ 21: ಈಗ ನಡೆಯುತ್ತಿರುವ ಐಪಿಎಲ್ ಟಿ-20 ಪಂದ್ಯಾವಳಿಯ ಲೀಗ್ ಹಂತದ ಪಂದ್ಯಗಳು ಕೊನೆಯ ಹಂತದಲ್ಲಿದ್ದು, ಮೂರು ತಂಡಗಳು ಈಗಾಗಲೇ ಪ್ಲೇ ಆಫ್ಗೆ ಲಗ್ಗೆ ಇಟ್ಟಿವೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಈಗಾಗಲೇ ಅರ್ಹತೆ ಗಿಟ್ಟಿಸಿಕೊಂಡಿವೆ. ನಾಲ್ಕನೇ ಹಾಗೂ ಕೊನೆಯ ಪ್ಲೇ ಆಫ್ ಸ್ಥಾನವು ಸಂಪೂರ್ಣ ಮುಕ್ತವಾಗಿದೆ.
ಲೀಗ್ ಹಂತವು ಕೊನೆಗೊಳ್ಳುತ್ತಿರುವಾಗ ಪ್ಲೇ ಆಫ್ ಪಂದ್ಯಗಳು, ಸ್ಥಳಗಳು ಹಾಗೂ ಪಂದ್ಯದ ದಿನಾಂಕದತ್ತ ಒಂದು ನೋಟ ಇಲ್ಲಿದೆ.
ಐಪಿಎಲ್-2026ರ ಪ್ಲೇ ಆಫ್ ಪಂದ್ಯಗಳು ಮೇ 26ರಂದು ಆರಂಭವಾಗಲಿವೆ. ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಧರ್ಮಶಾಲಾದ ಹಿಮಾಚಲಪ್ರದೇಶ ಕ್ರಿಕೆಟ್ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್-1ರಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ತಂಡವು ಫೈನಲ್ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದೆ.
ಮೇ 27ರಂದು ನ್ಯೂ ಚಂಡಿಗಡದ ಮುಲ್ಲನ್ಪುರದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಸೋಲುವ ತಂಡವು ಪಂದ್ಯಾವಳಿಯಿಂದ ಹೊರಗುಳಿಯಲಿದೆ. ವಿಜೇತ ತಂಡವು ನ್ಯೂ ಚಂಡಿಗಡದಲ್ಲಿ ಮೇ 29ರಂದು ನಡೆಯಲಿರುವ ಕ್ವಾಲಿಫೈಯರ್-2ರಲ್ಲಿ ಆಡಲಿದೆ.
ಕ್ವಾಲಿಫೈಯರ್-2 ಪಂದ್ಯದಲ್ಲಿ ಕ್ವಾಲಿಫೈಯರ್-1ರಲ್ಲಿ ಸೋತ ತಂಡವು ಎಲಿಮಿನೇಟರ್ನಲ್ಲಿ ಗೆದ್ದಿರುವ ತಂಡದೊಂದಿಗೆ ಫೈನಲ್ನಲ್ಲಿ ಸ್ಥಾನ ಪಡೆಯಲು ಹೋರಾಡಲಿದೆ.
2026ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 31ರಂದು ನಡೆಯಲಿದೆ. ಎಲ್ಲ ಪ್ಲೇ ಆಫ್ ಪಂದ್ಯಗಳು ರಾತ್ರಿ 7:30ಕ್ಕೆ ಆರಂಭವಾಗಲಿದೆ.






