IPL 2026 | ಲಕ್ನೋ ವಿರುದ್ಧ ಸೋತ ಚೆನ್ನೈಗೆ ಪ್ಲೇಆಫ್ ಹಾದಿ ಕಠಿಣ

Photo credit : X@IPL
ಚೆನ್ನೈ: ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಏಳು ವಿಕೆಟ್ಗಳ ಅಂತರದ ಸೋಲು ಅನುಭವಿಸುವ ಮೂಲಕ ಪ್ಲೇಆಫ್ ಹಂತಕ್ಕೇರುವ ಚೆನ್ನೈ ಕನಸಿಗೆ ಬಲವಾದ ಹೊಡೆತ ಬಿದ್ದಿದೆ.
ಆಕಾಶ್ ಸಿಂಗ್ ತಮ್ಮ ಮಾಜಿ ತಂಡದ ಮೂರು ಪ್ರಮುಖ ವಿಕೆಟ್ಗಳನ್ನು ಕಿತ್ತರೂ, ಕೊನೆಯ ಓವರ್ ಗಳಲ್ಲಿ ಕಾರ್ತಿಕ್ ಶರ್ಮಾ ಸಿಡಿಸಿದ ಅರ್ಧಶತಕದ ನೆರವಿನಿಂದ ಸಿಎಸ್ಕೆ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಆದರೆ ಕೇವಲ 38 ಎಸೆತಗಳಲ್ಲಿ 90 ರನ್ ಸಿಡಿಸಿದ ಮಿಚೆಲ್ ಮಾರ್ಷ್ ಮತ್ತು ಜೋಶ್ ಇಂಗ್ಲಿಸ್ (38) ಇನ್ನೂ ಮೂರು ಓವರ್ ಗಳು ಬಾಕಿ ಇರುವಂತೆಯೇ ಎಲ್ಎಸ್ಜಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ ಪಂದ್ಯದ ಸೋಲಿನ ಬಳಿಕ ಸಿಎಸ್ಕೆ ಅಂಕಪಟ್ಟಿಯಲ್ಲಿ ಒಟ್ಟು 12 ಅಂಕಗಳೊಂದಿಗೆ ಆರನೇ ಸ್ಥಾನಕ್ಕೆ ಕುಸಿದಿದೆ. ರಾಜಸ್ಥಾನ ರಾಯಲ್ಸ್ ಕೂಡಾ ಅಷ್ಟೇ ಅಂಕಗಳನ್ನು ಹೊಂದಿದ್ದರೂ, ನಿವ್ವಳ ರನ್ರೇಟ್ ಆಧಾರದಲ್ಲಿ ಆರ್ ಆರ್ ಮೇಲಿನ ಸ್ಥಾನದಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಹಂತಕ್ಕೇರಲು ಎಸ್ಆರ್ ಎಚ್ ಹಾಗೂ ಗುಜರಾತ್ ಟೈಟನ್ಸ್ ವಿರುದ್ಧದ ಎರಡೂ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯ. ಆಗ ಸಿಎಸ್ಕೆ 14 ಪಂದ್ಯಗಳಿಂದ 16 ಅಂಕ ಕಲೆಹಾಕಿದಂತಾಗುತ್ತದೆ. ಆದಾಗ್ಯೂ ಐದು ತಂಡಗಳಿಗೆ 16 ಅಥವಾ ಹೆಚ್ಚು ಅಂಕ ಗಳಿಸುವ ಅವಕಾಶವಿದ್ದು, ಸಿಎಸ್ಕೆ ಪಾಲಿಗೆ ಮುಂದಿನ ಹಾದಿ ಅತ್ಯಂತ ಕಠಿಣವಾಗಿದೆ.
ಮತ್ತೊಂದೆಡೆ ಎರಡು ಪಂದ್ಯಗಳ ಪೈಕಿ ಒಂದನ್ನು ಸೋತಲ್ಲಿ ಅಗ್ರ ನಾಲ್ಕರಲ್ಲಿ ಸಿಎಸ್ಕೆ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ. ಅಂಥ ಪರಿಸ್ಥಿತಿಯಲ್ಲಿ ಇತರ ತಂಡಗಳ ಫಲಿತಾಂಶ ಮತ್ತು ನಿವ್ವಳ ರನ್ ರೇಟ್ ಆಧಾರದಲ್ಲಿ ಸ್ಥಾನ ನಿರ್ಧಾರವಾಗಬೇಕಾಗುತ್ತದೆ. ಇನ್ನೊಂದೆಡೆ ಗೆಲುವಿನ ಹೊರತಾಗಿಯೂ ಎಲ್ಎಸ್ಜಿ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.






