IPL 2026 | ಮುಂಬೈ ವಿರುದ್ಧ ಆರ್ಸಿಬಿಗೆ ರೋಮಾಂಚಕ 2 ವಿಕೆಟ್ ಜಯ

Photo: x/@IPL
ರಾಯ್ಪುರ, ಮೇ 10: ರವಿವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕಾರ್ಬಿನ್ ಬೋಶ್ ಅವರ ಅಮೋಘ ಬೌಲಿಂಗ್ ನಡುವೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಕೊನೆಯ ಎಸೆತದಲ್ಲಿ 2 ವಿಕೆಟ್ ಗಳ ರೋಮಾಂಚಕ ಜಯ ಸಾಧಿಸಿತು.
ರಾಯ್ಪುರದ ಶಹೀದ್ ವೀರನಾರಾಯಣ ಸಿಂಗ್ ಅಂತರ್ರಾಷ್ಟ್ರೀಯ ಸ್ಟೇಡಿಯಮ್ ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 167 ರನ್ಗಳ ಗುರಿ ಪಡೆದ ಬೆಂಗಳೂರು ತಂಡವು 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 167 ರನ್ಗಳನ್ನು ಕಲೆಹಾಕಿತು.
ಆರ್ಸಿಬಿಯ ಅಗ್ರ ಕ್ರಮಾಂಕದ ಬ್ಯಾಟರ್ಗಳು ಕೈಕೊಟ್ಟರು. ವಿರಾಟ್ ಕೊಹ್ಲಿ ಶೂನ್ಯಕ್ಕೆ ವಾಪಸಾದರೆ, ದೇವದತ್ ಪಡಿಕ್ಕಲ್ ಕೇವಲ 12 ರನ್ ಗಳಿಸಿದರು.
ಆದರೆ ಕೃಣಾಲ್ ಪಾಂಡ್ಯ 46 ಎಸೆತಗಳಲ್ಲಿ 73 ರನ್ಗಳನ್ನು ಸಿಡಿಸಿ ತಂಡಕ್ಕೆ ಪುನಶ್ಚೇತನ ನೀಡಿದರು. ಅಂತಿಮವಾಗಿ ಭುವನೇಶ್ವರ್ ಕುಮಾರ್ ವಿಜಯದ ರನ್ ಗಳನ್ನು ಗಳಿಸಿದರು.
ಕಾರ್ಬಿನ್ ಬೋಶ್ 4 ಓವರ್ ಗಳಲ್ಲಿ ಕೇವಲ 26 ರನ್ ನೀಡಿ 4 ಮಹತ್ವದ ವಿಕೆಟ್ ಗಳನ್ನು ಪಡೆದರು.
ಇದಕ್ಕೂ ಮೊದಲು ಟಾಸ್ ಸೋತ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ನಡೆಸಿತು.
ಭುವನೇಶ್ವರ್ ಕುಮಾರ್ ಅವರ ನಾಲ್ಕು ವಿಕೆಟ್ ಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವನ್ನು 20 ಓವರ್ ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 166 ರನ್ ಗಳಿಗೆ ನಿಯಂತ್ರಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಯಿತು.
ಭುವನೇಶ್ವರ್ ಕುಮಾರ್ ತಮ್ಮ ಮೊದಲ ಎರಡು ಓವರ್ ಗಳಲ್ಲಿ ಮೂರು ವಿಕೆಟ್ ಗಳನ್ನು ಉರುಳಿಸಿ ಮುಂಬೈ ಇಂಡಿಯನ್ಸ್ ನ ಅಗ್ರ ಕ್ರಮಾಂಕವನ್ನು ಅಸ್ಥಿರಗೊಳಿಸಿದರು.
ಒಂದು ಹಂತದಲ್ಲಿ ಮುಂಬೈ ಇಂಡಿಯನ್ಸ್ 28 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಬಳಿಕ ತಿಲಕ್ ವರ್ಮಾ (42 ಎಸೆತಗಳಲ್ಲಿ 57) ಮತ್ತು ನಮನ್ ಧೀರ್ (32 ಎಸೆತಗಳಲ್ಲಿ 47) ತಂಡವನ್ನು ತಕ್ಷಣದ ಅಪಾಯದಿಂದ ಪಾರು ಮಾಡಿದರು. ಅವರು ನಾಲ್ಕನೇ ವಿಕೆಟ್ಗೆ 82 ರನ್ಗಳ ಜೊತೆಯಾಟವಾಡಿದರು.
ಬಳಿಕ ಮತ್ತೆ ದಾಳಿಗೆ ಬಂದ ಭುವನೇಶ್ವರ್ ಕುಮಾರ್ ತಿಲಕ್ ವರ್ಮಾ ವಿಕೆಟ್ ಪಡೆದರು. ಆ ಮೂಲಕ ತಮ್ಮ ವಿಕೆಟ್ ಗಳ ಸಂಖ್ಯೆಯನ್ನು ನಾಲ್ಕಕ್ಕೆ ಏರಿಸಿದರು.
ಇಂದಿನ ಪಂದ್ಯದಲ್ಲಿ ನಿಯಮಿತ ನಾಯಕ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರಗಿದ್ದರು. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದರು.
ಸಂಕ್ಷಿಪ್ತ ಸ್ಕೋರ್
ಮುಂಬೈ ಇಂಡಿಯನ್ಸ್: 20 ಓವರ್ಗಳಲ್ಲಿ 166-7
ರೋಹಿತ್ ಶರ್ಮಾ 22, ನಮನ್ ಧೀರ್ 47, ತಿಲಕ್ ವರ್ಮಾ 57
ಭುವನೇಶ್ವರ್ ಕುಮಾರ್ 4-23
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್ಗಳಲ್ಲಿ 167-8
ಜಾಕೋಬ್ ಬೆತೆಲ್ 26, ಕೃಣಾಲ್ ಪಾಂಡ್ಯ 73
ದೀಪಕ್ ಚಾಹರ್ 2-33, ಕಾರ್ಬಿನ್ ಬೋಶ್ 4-26






