ಐಪಿಎಲ್ 2026: ಮಾ.12ರಂದು ಮೊದಲ 20 ದಿನಗಳ ವೇಳಾಪಟ್ಟಿ ಪ್ರಕಟ

Photo Credit : iplt20.com
ಹೊಸದಿಲ್ಲಿ: ಮುಂಬರುವ 2026ರ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ 20 ದಿನಗಳ ವೇಳಾಪಟ್ಟಿಯನ್ನು ಮಾರ್ಚ್ 12ರಂದು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.
19ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 28ರಿಂದ ಮೇ 31ರ ತನಕ ನಡೆಯಲಿದೆ. ಈ ಹಿಂದೆ ಪಂದ್ಯಾವಳಿಯನ್ನು ಮಾರ್ಚ್ 26ರಿಂದ ಮೇ 30ರ ತನಕ ಆಯೋಜಿಸಲು ಯೋಜಿಸಲಾಗಿತ್ತು. ಇದೀಗ ದಿನಾಂಕದಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಮಾಡಲಾಗಿದೆ.
‘‘ನಾವು ಮಾರ್ಚ್ 12ರಂದು 2026ರ ಆವೃತ್ತಿಯ ಐಪಿಎಲ್ ವೇಳಾಪಟ್ಟಿಯನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿದ್ದೆವು. ಇದೀಗ ನಾವು ಮೊದಲ 20 ದಿನಗಳ ಐಪಿಎಲ್ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಿದ್ದೇವೆ’’ ಎಂದು ಸೈಕಿಯಾ ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದರು.
ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ತಮಿಳುನಾಡು ವಿಧಾನಸಭೆ ಚುನಾವಣೆಯ ದಿನಾಂಕದೊಂದಿಗಿನ ಘರ್ಷಣೆಯನ್ನು ತಪ್ಪಿಸಲು ಉದ್ದೇಶಿಸಿರುವ ಬಿಸಿಸಿಐ, ಪಂದ್ಯಾವಳಿಯ ಉಳಿದ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲು ನಿರ್ಧರಿಸಿದೆ.
ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲೇ ಐಪಿಎಲ್ ತಂಡಗಳು ಈಗಾಗಲೇ ಹೊಸ ಋತುವಿಗೆ ತಮ್ಮ ಸಿದ್ಧತೆಯನ್ನು ಆರಂಭಿಸಿವೆ.
ಚೆನ್ನೈ ಸೂಪರ್ ಕಿಂಗ್ಸ್ ಮಾರ್ಚ್ 1ರಂದು ನವಲೂರ್ನ ಉನ್ನತ-ಪ್ರದರ್ಶನ ಕೇಂದ್ರದಲ್ಲಿ ತರಬೇತಿ ಆರಂಭಿಸಿದೆ. ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಎಂ.ಎಸ್. ಧೋನಿ ಇದರಲ್ಲಿ ಭಾಗಿಯಾಗಿದ್ದಾರೆ.
ಹಾಲಿ ಚಾಂಪಿಯನ್ RCB ಫೆ.10ರಂದು ನವಿ ಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಕಿರು ತರಬೇತಿ ಶಿಬಿರವನ್ನು ಆಯೋಜಿಸಿದೆ. ಇದೇ ವೇಳೆ, 2022ರ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮಿರಾಜ್ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಎರಡು ಬಾರಿ ಅಭ್ಯಾಸ ನಡೆಸಿದೆ.
ಪಂಜಾಬ್ ಕಿಂಗ್ಸ್ ತಂಡವು ಅಬುಧಾಬಿಯಲ್ಲಿ ಫೆಬ್ರವರಿಯಲ್ಲಿ ತರಬೇತಿ ನಡೆಸಿದೆ. ಇದೀಗ ಧರ್ಮಶಾಲಾದಲ್ಲಿ ಶಿಬಿರ ಆಯೋಜಿಸಿದೆ. ಸನ್ರೈಸರ್ಸ್ ಹೈದರಾಬಾದ್ ತಂಡ ದೇಶೀಯ ಅಟಗಾರರೊಂದಿಗೆ ಮಾರ್ಚ್ 1ರಂದು ತನ್ನ ಶಿಬಿರವನ್ನು ಆರಂಭಿಸಿದೆ. ಮುಂಬೈ ಇಂಡಿಯನ್ಸ್ ತಂಡ ಕೂಡ ತನ್ನ ತಯಾರಿ ಆರಂಭಿಸಿದೆ.
ರಾಜಸ್ಥಾನ ರಾಯಲ್ಸ್ ತಂಡವು ಮಾ.15ರಂದು ಜೈಪುರದಲ್ಲಿ ತನ್ನ ತರಬೇತಿ ಶಿಬಿರ ಆರಂಭಿಸುವ ನಿರೀಕ್ಷೆ ಇದೆ. ಕೋಲ್ಕತಾ ತಂಡವು ಮಾ.18ರಂದು ತನ್ನ ಪೂರ್ವತಯಾರಿ ಶಿಬಿರ ಆರಂಭಿಸಲಿದೆ.







