ಪವರ್ ಪ್ಲೇನಲ್ಲಿ ಮೂರನೇ ಬಾರಿ 100ಕ್ಕೂ ಅಧಿಕ ರನ್: ಮೊದಲ ತಂಡ SRH

Photo Credit : PTI
ಮುಲ್ಲನ್ಪುರ, ಎ.11: ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಪವರ್ ಪ್ಲೇನಲ್ಲಿ ರನ್ ಹೊಳೆ ಹರಿಸಿದರು. ಶನಿವಾರ ನಡೆದ IPL ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು.
ಮೊದಲ ಎರಡು ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 20 ರನ್ ಗಳಿಸಿದ್ದ SRH ಕೇವಲ 3.4 ಓವರ್ ಗಳಲ್ಲಿ 50 ರನ್ ತಲುಪಿತು. ಅರ್ಷದೀಪ್ ಸಿಂಗ್ ಬೌಲಿಂಗ್ ನಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದ ಅಭಿಷೇಕ್ ರನ್ ವೇಗಕ್ಕೆ ಚಾಲನೆ ನೀಡಿದರು. ಅವರು ನಾಲ್ಕು ಸಿಕ್ಸರ್ ಗಳ ಸಹಿತ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ವಿಜಯಕುಮಾರ್ ಓವರ್ ನಲ್ಲಿ ನಾಲ್ಕು ಸಿಕ್ಸರ್ ಗಳ ಸಹಿತ 24 ರನ್ ಕೊಳ್ಳೆ ಹೊಡೆದರು.
ಮತ್ತೊಂದೆಡೆ ಹೆಡ್ ಕೂಡ ಅಬ್ಬರದ ಬ್ಯಾಟಿಂಗ್ ಮಾಡಿ, ಕ್ಸೇವಿಯರ್ ಬಾರ್ಟ್ಲೆಟ್ ಬೌಲಿಂಗ್ ನಲ್ಲಿ ಹ್ಯಾಟ್ರಿಕ್ ಬೌಂಡರಿ ಬಾರಿಸಿದರು. ಹೈದರಾಬಾದ್ ತಂಡವು ಆರು ಓವರ್ ಗಳೊಳಗೆ 100 ರನ್ ಗಡಿ ದಾಟಿತು.
ಪವರ್ ಪ್ಲೇ ಅಂತ್ಯದ ವೇಳೆಗೆ SRH ವಿಕೆಟ್ ನಷ್ಟವಿಲ್ಲದೆ 105 ರನ್ ಗಳಿಸಿತು. ಈ ಹಂತದಲ್ಲಿ ತಂಡವು ಸಾಮಾನ್ಯವಾಗಿ ಗಳಿಸುವ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು ರನ್ ಗಳಿಸಿದೆ.
SRH ಪವರ್ ಪ್ಲೇನಲ್ಲಿ ಮೂರನೇ ಬಾರಿ 100ಕ್ಕೂ ಅಧಿಕ ರನ್ ಕಲೆ ಹಾಕಿ IPL ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಂಡಿದೆ. ಯಾವುದೇ ತಂಡವೂ ಒಂದಕ್ಕಿಂತ ಹೆಚ್ಚು ಬಾರಿ ಈ ಸಾಧನೆ ಮಾಡಿಲ್ಲ. ಹೀಗಾಗಿ ಇದು ಅಪರೂಪದ ಸಾಧನೆಯಾಗಿದೆ.
SRH ಈ ಹಿಂದೆ 2024ರ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿಕೆಟ್ ನಷ್ಟವಿಲ್ಲದೆ 125 ರನ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ವಿಕೆಟ್ ನಷ್ಟವಿಲ್ಲದೆ 107 ರನ್ ಗಳಿಸಿತ್ತು.
ಕೋಲ್ಕತಾ ನೈಟ್ ರೈಡರ್ಸ್ (2017ರಲ್ಲಿ 105/0) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (2014ರಲ್ಲಿ 100/2) ತಲಾ ಒಂದು ಬಾರಿ ಈ ಸಾಧನೆ ಮಾಡಿದ್ದವು.
ಅಭಿಷೇಕ್ ಶರ್ಮಾ IPL ಇನಿಂಗ್ಸ್ನ ಪವರ್ ಪ್ಲೇನಲ್ಲಿ ಗರಿಷ್ಠ ಸಿಕ್ಸರ್ ಗಳು (ಏಳು) ಸಿಡಿಸಿ ದಾಖಲೆ ನಿರ್ಮಿಸಿದರು. ಸನತ್ ಜಯಸೂರ್ಯ, ಜೋಸ್ ಬಟ್ಲರ್ ಹಾಗೂ ಜಾನಿ ಬೈರ್ಸ್ಟೋವ್ ಅವರ ಪಟ್ಟಿಗೆ ಸೇರಿದರು.







