IPL 2026 | ಮತ್ತೊಮ್ಮೆ ಕಪ್ ಗೆಲ್ಲಲು ಹಾಲಿ ಚಾಂಪಿಯನ್ ಆರ್ಸಿಬಿಯಿಂದ ಪ್ರಬಲ ಕಾರ್ಯತಂತ್ರ

PC : x/@RCBTweets
ಬೆಂಗಳೂರು : ಐಪಿಎಲ್ ಪ್ರಸಕ್ತ ವರ್ಷದ ಸೀಸನ್ ಆರಂಭಕ್ಕೆ ಕೇವಲ ಒಂದು ವಾರ ಬಾಕಿ ಉಳಿದಿರುವಂತೆಯೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಅಬುಧಾಬಿಯಲ್ಲಿ ಇತ್ತೀಚೆಗೆ ನಡೆದ 2026 ಮಿನಿ ಹರಾಜಿನಲ್ಲಿ 17 ಮಂದಿಯ ಪ್ರಬಲ ತಂಡವನ್ನು ಉಳಿಸಿಕೊಂಡಿದ್ದು, ಹೆಚ್ಚುವರಿಯಾಗಿ ಕೆಲವರನ್ನು ಸೇರಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಹಾಲಿ ಚಾಂಪಿಯನ್ ಆಗಿ ಆರ್ಸಿಬಿ ಐಪಿಎಲ್ ಸೀಸನ್ ಆರಂಭಿಸುತ್ತಿದೆ.
ಉತ್ತಮ ಫಾರ್ಮ್ನಲ್ಲಿರುವ ಅನುಭವಿ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ತಂಡದ ಇನಿಂಗ್ಸ್ ಆರಂಭಿಸಲಿದ್ದಾರೆ. ಚುಟುಕು ಕ್ರಿಕೆಟ್ನಲ್ಲಿ 9,000 ರನ್ ಮೈಲುಗಲ್ಲು ದಾಟಿರುವ ಹಿರಿಯ ಆಟಗಾರ ಪವರ್ ಪ್ಲೇಯಲ್ಲಿ ತಂಡಕ್ಕೆ ರಭಸದ ಆರಂಭ ಒದಗಿಸುವಲ್ಲಿ ಪ್ರಮುಖ ಅಸ್ತ್ರ ಎನಿಸಿದ್ದಾರೆ. ಕಳೆದ ಸೀಸನ್ನಲ್ಲಿ ಚಾಂಪಿಯನ್ ಶಿಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಫಿಲ್ ಸಾಲ್ಟ್, ಕೊಹ್ಲಿಗೆ ಸಾಥ್ ನೀಡಲಿದ್ದಾರೆ. ಆದರೆ ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಜಾಕೋಬ್ ಬೆಥೆಲ್ ಅವರಿಂದ ಫಿಲ್ ಸ್ಥಾನಕ್ಕೆ ತುರುಸಿನ ಸ್ಪರ್ಧೆ ಇದೆ.
ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಆಗಮಿಸಲಿರುವ ದೇವದತ್ ಪಡಿಕ್ಕಲ್ ಸ್ಫೋಟಕ ಆರಂಭಕಾರರು ಮತ್ತು ಮಧ್ಯಮ ಕ್ರಮಾಂಕದ ನಡುವಿನ ಕೊಂಡಿ ಎನಿಸಲಿದ್ದಾರೆ. ಇವರು ಈ ಸ್ಥಾನಕ್ಕೆ ಮೊದಲ ಆಯ್ಕೆಯಾದರೂ 7 ಕೋಟಿಗೆ ತಂಡ ಖರೀದಿಸಿರುವ ವೆಂಕಟೇಶ್ ಅಯ್ಯರ್ ಅವರು ಮೂರನೇ ಕ್ರಮಾಂಕಕ್ಕೆ ಲಗ್ಗೆ ಹಾಕುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ತಂಡಕ್ಕೆ ಚೊಚ್ಚಲ ಪ್ರಶಸ್ತಿ ತಂದುಕೊಟ್ಟ ರಜತ್ ಪಾಟಿದಾರ್, ಉತ್ತಮ ನಾಯಕತ್ವ ಕೌಶಲದ ಜತೆಗೆ ತಂಡಕ್ಕೆ ಶಕ್ತಿಶಾಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಎನಿಸಿದ್ದಾರೆ.
ಉತ್ತಮ ವಿಕೆಟ್ ಕೀಪರ್ ಮತ್ತು ಫಿನಿಶರ್ ಎನಿಸಿರುವ ಜಿತೇಶ್ ಶರ್ಮಾ, ಟಿಮ್ ಡೇವಿಡ್ ಮತ್ತು ರೋಮಿಯೋ ಶೆಪರ್ಡ್ ಅಂತಿಮ ಓವರ್ ಗಳಲ್ಲಿ ರನ್ಗತಿ ಹೆಚ್ಚಿಸುವ ಪ್ರಮುಖ ಆಟಗಾರರು. ಆಲ್ರೌಂಡರ್ ಕೃನಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಯಶ್ ದಯಾಳ್, ಜಾಕೋಬ್ ದುಫೆ, ಇಂಪ್ಯಾಕ್ಟ್ ಪ್ಲೇಯರ್ ಸುಯಶ್ ಶರ್ಮಾ ಬೌಲಿಂಗ್ ವಿಭಾಗದ ಹೊಣೆ ಹೊರಲಿದ್ದಾರೆ.







