IPL 2025 | ನಾಳೆ ಮುಂಬೈ, ಡೆಲ್ಲಿಗೆ ಮಾಡು-ಮಡಿ ಪಂದ್ಯ
ಕೊನೆಯ ಪ್ಲೇ-ಆಫ್ ಸ್ಥಾನಕ್ಕಾಗಿ ತಂಡಗಳ ಹೋರಾಟ

ಸಾಂದರ್ಭಿಕ ಚಿತ್ರ | PTI
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಯ ಲಭ್ಯವಿರುವ ಏಕೈಕ ಪ್ಲೇ-ಆಫ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್ ಬುಧವಾರ ಮುಂಬೈಯ ವಾಂಖೇಡೆ ಸ್ಟೇಡಿಯಮ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಲಕ್ನೋ ಸೂಪರ್ ಜಯಂಟ್ಸ್ ತಂಡವನ್ನು ಆರು ವಿಕೆಟ್ಗಳಿಂದ ಸೋಲಿಸಿದೆ. ಇದರೊಂದಿಗೆ, ಪ್ಲೇಆಫ್ ತಲುಪುವ ಲಕ್ನೋ ತಂಡದ ಕನಸು ಕನಸಾಗಿಯೇ ಉಳಿಯಿತು. ಈಗ ಉಳಿದಿರುವ ಒಂದು ಪ್ಲೇಆಫ್ ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.
ಮೊದಲ ಮೂರು ಪ್ಲೇ-ಆಫ್ ಸ್ಥಾನಗಳನ್ನು ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪಡೆದಿವೆ.ಈಗ ನಾಲ್ಕನೇ ಪ್ಲೇ-ಆಫ್ ಸ್ಥಾನವನ್ನು ಗೆಲ್ಲಲು ಮುಂಬೈ ಇಂಡಿಯನ್ಸ್ (14 ಅಂಕಗಳು) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (13 ಅಂಕಗಳು) ಎರಡೂ ತಂಡಗಳಿಗೆ ಸಮಾನ ಅವಕಾಶವಿದೆ. ಈ ಹಂತದಲ್ಲಿ ಈ ಎರಡೂ ತಂಡಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.
ಬುಧವಾರದ ಪಂದ್ಯದಲ್ಲಿ ಮುಂಬೈ ಗೆದ್ದರೆ ಅದು 16 ಅಂಕಗಳೊಂದಿಗೆ ಪ್ಲೇಆಫ್ ತಲುಪುತ್ತದೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ-ಆಫ್ಗೆ ಅರ್ಹತೆಯನ್ನು ಪಡೆಯಬೇಕಾದರೆ ಅದು ತನ್ನ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಅದು ತನ್ನ ಗುಂಪು ಹಂತದ ಕೊನೆಯ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.
ಈ ಹಂತದಲ್ಲಿ, ಮುಂಬೈ ಇಂಡಿಯನ್ಸ್ ಉತ್ತಮ ಫಾರ್ಮ್ನಲ್ಲಿದೆ. ಐದು ಬಾರಿಯ ಚಾಂಪಿಯನ್ ತಂಡವು ಹಾಲಿ ಋತುವಿನಲ್ಲಿ ಆರಂಭಿಕ ಹಿನ್ನಡೆಗಳನ್ನು ಮೆಟ್ಟಿ ನಿಂತು ನಿರಂತರವಾಗಿ ಪಂದ್ಯಗಳನ್ನು ಗೆಲ್ಲುತ್ತಾ ಬರುತ್ತಿದೆ. ಅದು ನಿರಂತರವಾಗಿ ಆರು ಪಂದ್ಯಗಳನ್ನು ಗೆದ್ದ ಬಳಿಕ, ಸುಮಾರು ಎರಡು ವಾರಗಳ ಹಿಂದೆ ಗುಜರಾತ್ ಟೈಟಾನ್ಸ್ ವಿರುದ್ಧ ಕಿರು ಅಂತರದ ಸೋಲನುಭವಿಸಿದೆ.
ಬುಧವಾರದ ಗೆಲುವು ಮುಂಬೈ ಇಂಡಿಯನ್ಸ್ ತಂಡವನ್ನು ಪ್ಲೇ-ಆಫ್ಗೆ ಒಯ್ಯಲಿದೆ. ಒಂದು ವೇಳೆ, ಈ ಪಂದ್ಯದಲ್ಲಿ ಅದು ಸೋತರೆ ಅದರ ಹಣೆಬರಹವನ್ನು ಮೇ 24ರಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ನಿರ್ಧರಿಸಲಿದೆ. ಆ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಗೆದ್ದರೆ ಹಾಗೂ ಮೇ 26ರಂದು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದರೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ತಲುಪುತ್ತದೆ.
ಆಡುವ 11ರಲ್ಲಿ ದಕ್ಷಿಣ ಆಫ್ರಿಕದ ಆಟಗಾರರಾದ ರಯಾನ್ ರಿಕಲ್ಟನ್ ಮತ್ತು ಕಾರ್ಬಿನ್ ಬೋಶ್ ಇರುವ ತಂಡದಿಂದ ಗರಿಷ್ಠ ಪ್ರಯೋಜನವನ್ನು ಪಡೆಯಲು ಮುಂಬೈ ಇಂಡಿಯನ್ಸ್ ಶ್ರಮಿಸಲಿದೆ. ಆದರೆ, ಈ ಆಟಗಾರರು ಪ್ಲೇಆಫ್ಗೆ ಲಭ್ಯರಿರುವುದಿಲ್ಲ.
ಇನ್ನೊಂದು ಕಡೆ, ಡೆಲ್ಲಿ ಕ್ಯಾಪಿಟಲ್ಸ್ನ ಪ್ರಮುಖ ಬೌಲರ್ ಆಸ್ಟ್ರೇಲಿಯದ ಮಿಚೆಲ್ ಸ್ಟಾರ್ಕ್ (14 ವಿಕೆಟ್ಗಳು) ಸ್ವದೇಶಕ್ಕೆ ವಾಪಸಾಗಿದ್ದಾರೆ. ಇನ್ನುಳಿದ ಪಂದ್ಯಗಳಿಗೆ ಅವರು ಡೆಲ್ಲಿ ಕ್ಯಾಪಿಟಲ್ಸ್ಗೆ ಲಭ್ಯರಿರುವುದಿಲ್ಲ. ಮಾಡು-ಇಲ್ಲವೇ-ಮಡಿ ಪಂದ್ಯದಲ್ಲಿ ಯಶಸ್ವಿ ಬೌಲರ್ ಆಡದಿರುವುದು ಡೆಲ್ಲಿ ಕ್ಯಾಪಿಟಲ್ಸ್ಗೆ ದೊಡ್ಡ ಹಿನ್ನಡೆಯಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಕೆ.ಎಲ್. ರಾಹುಲ್ರ ಬ್ಯಾಟಿಂಗನ್ನು ನೆಚ್ಚಿಕೊಂಡಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಶತಕ ಬಾರಿಸಿದರಾದರೂ, ತಂಡವು 10 ವಿಕೆಟ್ಗಳ ಸೋಲನುಭವಿಸಿತು. ಅದು ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ವಿಭಾಗದ ದೌರ್ಬಲ್ಯವನ್ನು ತೆರೆದಿಟ್ಟಿದೆ.







